ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕಚೇರಿಯಲ್ಲಿ ಸ್ಫೋಟಕ ಬೆದರಿಕೆಯೊಂದು ತೀವ್ರ ಆತಂಕ ಸೃಷ್ಟಿಸಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣವೊಂದನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬರು ಬಿಎಂಆರ್‌ಸಿಎಲ್‌ನ ಅಧಿಕೃತ ಇಮೇಲ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ಘಟನೆ ವಿವರ:
ಕಳೆದ ನವೆಂಬರ್ 14ರ ರಾತ್ರಿ ಸುಮಾರು 11.30ರ ಸುಮಾರಿಗೆ ಬಿಎಂಆರ್‌ಸಿಎಲ್‌ನ ಅಧಿಕೃತ ಇಮೇಲ್‌ಗೆ ಈ ಬೆದರಿಕೆ ಸಂದೇಶ ಬಂದಿದೆ. ಇಮೇಲ್ ಕಳುಹಿಸಿದ ವ್ಯಕ್ತಿ, ಮೆಟ್ರೋ ಸಿಬ್ಬಂದಿಯಾಗಿರುವ ತನ್ನ ವಿಚ್ಛೇದಿತ ಪತ್ನಿಗೆ ಡ್ಯೂಟಿ ಮುಗಿದ ನಂತರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಿರುಕುಳ ಮುಂದುವರಿದರೆ, “ನಿಮ್ಮ ಒಂದು ಮೆಟ್ರೋ ನಿಲ್ದಾಣವನ್ನು ಬ್ಲಾಸ್ಟ್ ಮಾಡಬೇಕಾಗುತ್ತದೆ” ಎಂದು ಬೆದರಿಕೆ ಹಾಕಲಾಗಿದೆ. ಈತ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿದ್ದು, “ನಾನು ಉಗ್ರಗಾಮಿಯಂತೆ, ಅದರಲ್ಲೂ ಕನ್ನಡಿಗರ ವಿರುದ್ಧ” ಎಂದು ಬರೆದು ಆತಂಕ ಹೆಚ್ಚಿಸಿದ್ದಾನೆ.
ದೂರು ಮತ್ತು ತನಿಖೆ:
ಈ ಇಮೇಲ್ ಸಂದೇಶದ ಗಂಭೀರತೆಯನ್ನು ಮನಗಂಡ ಬಿಎಂಆರ್‌ಸಿಎಲ್ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡರು. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ದೂರಿನನ್ವಯ ಪೊಲೀಸರು ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೆಟ್ರೋ ಭದ್ರತೆಗೆ ಸವಾಲು ಒಡ್ಡಿರುವ ಈ ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಇಮೇಲ್ ಮೂಲ ಮತ್ತು ಇತರ ತಾಂತ್ರಿಕ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

