ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರವಾರ ತಾಲೂಕಿನ ಗೇರುಸೊಪ್ಪಾ ಸಮೀಪದ ಸೂಳೆಮುರ್ಕಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದು, ಮರಕ್ಕೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ.
ಸುಮಾರು 2 ಗಂಟೆಯ ವೇಳೆ ಹಾನಗಲ್‌ನಿಂದ ಹೊರಟಿದ್ದ ಸರ್ಕಾರಿ ಬಸ್ ಸಿದ್ದಾಪುರ ಮಾರ್ಗವಾಗಿ ಹೊನ್ನಾವರದ ಕಡೆಗೆ ಸಾಗುತ್ತಿದ್ದ ವೇಳೆ ಘಟ್ಟ ಪ್ರದೇಶದ ಕಠಿಣ ಇಳಿಜಾರು ತಿರುವು ಬಳಿ ಬಸ್ ಹಿಡಿತ ಕಳೆದುಕೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತಕ್ಷಣ ಕೊಂಡೊಯ್ಯಲಾಗಿದೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆ ಹಿನ್ನೆಲೆಯಲ್ಲಿ ಬಸ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

