Tuesday, November 18, 2025

ಕುಡಿತದ ಚಾಳಿ ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ: 4 ವರ್ಷದ ಕಂದ ಅನಾಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಡಿದು ಮನೆಗೆ ಬಂದ ಪತಿಯನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಪಾಪಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ.

ಪಾವನಿ (30) ಮೃತ ದುರ್ದೈವಿಯಾಗಿದ್ದು, ಈ ಕ್ರೂರ ಕೃತ್ಯ ಎಸಗಿದ ಪತಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಪಾವನಿ ಮತ್ತು ರಾಘವೇಂದ್ರ ಅವರ ವಿವಾಹವಾಗಿತ್ತು. ಇತ್ತೀಚೆಗೆ ರಾಘವೇಂದ್ರ ಊರಿಗೆ ಬಂದಿದ್ದರೂ ಮನೆಗೆ ಬಾರದೇ ಅಲೆದಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಪಾವನಿ, “ಊರಿಗೆ ಬಂದ್ರೂ ಯಾಕೆ ಮನೆಗೆ ಬಂದಿಲ್ಲ? ಕುಡ್ಕೊಂಡು ಎಲ್ಲೋ ಬಿದ್ದಿರ್ತಿಯಾ, ಮನೆಗೆ ಬರಲು ಆಗಲ್ವಾ?” ಎಂದು ಕೇಳಿದ್ದಾಳೆ.

ಈ ಮಾತಿನಿಂದ ಕೆರಳಿದ ರಾಘವೇಂದ್ರ, ಪತ್ನಿ ಪಾವನಿಯೊಂದಿಗೆ ತೀವ್ರವಾಗಿ ಜಗಳ ಪ್ರಾರಂಭಿಸಿದ್ದಾನೆ. ಈ ಗಲಾಟೆ ತಾರಕಕ್ಕೇರಿ, ರಾಘವೇಂದ್ರನು ಆಕ್ರೋಶದಿಂದ ಪತ್ನಿಯ ಕುತ್ತಿಗೆಗೆ ವೇಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪತಿಯ ಅಮಲಿನ ಕೋಪಕ್ಕೆ ಪತ್ನಿ ಬಲಿಯಾಗಿದ್ದು, ಇತ್ತ ತಾಯಿಯನ್ನು ಕಳೆದುಕೊಂಡು, ಅತ್ತ ತಂದೆ ಜೈಲು ಪಾಲಾಗಿರುವ ಕಾರಣ ಈ ದಂಪತಿಯ 4 ವರ್ಷದ ಗಂಡು ಮಗು ಅನಾಥವಾಗಿದೆ. ಈ ಸಂಬಂಧ ಗೌರಿಬಿದನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!