ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರ ಕೈಯ್ಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನವಾಗಿದ್ದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ:
ಸಿದ್ದಾಪುರ ಸಮೀಪದ ಘಟ್ಟದಹಳ್ಳ ಗ್ರಾಮದ ನಿವಾಸಿಗಳಾದ ಪಂಜರಿ ಎರವರ ಸಿದ್ದಯ್ಯ (20) ಹಾಗೂ ಪಂಜರಿ ಎರವರ ಮಾದಪ್ಪ (26) ಬಂಧಿತ ಆರೋಪಿಗಳು.
ಕಳೆದ ನವೆಂಬರ್ 15ರಂದು ಸಂಜೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದ ನಿವಾಸಿ ಶೈನಿ ಎಂಬುವವರು ತಮ್ಮ ಮಕ್ಕಳೊಂದಿಗೆ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೋಲ್ಲಿ ಟಾಟಾ ಕಾಫಿ ಎಸ್ಟೇಟ್ ಸಮೀಪದ ಜಂಕ್ಷನ್ ಬಸ್ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಅವರ ಕೈಯ್ಯಲ್ಲಿದ್ದ ಮೊಬೈಲ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಪೊಲೀಸರ ತ್ವರಿತ ಕಾರ್ಯಚರಣೆ:
ಈ ಕೃತ್ಯದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ: 304(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಯಿತು.
ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ನಗರ ವೃತ್ತದ ಇನ್ಸ್‌ಪೆಕ್ಟರ್ ರಾಜು.ಪಿ.ಕೆ, ಸಿದ್ದಾಪುರ ಠಾಣಾಧಿಕಾರಿ ಶ್ರೀ ಮಂಜುನಾಥ್.ಈ, ಮತ್ತು ಠಾಣಾ ಅಪರಾಧ ಪತ್ತೆ ಹಾಗೂ ತಾಂತ್ರಿಕ ಸಿಬ್ಬಂದಿಗಳು ಒಳಗೊಂಡ ಈ ವಿಶೇಷ ತಂಡವು ಶೀಘ್ರವಾಗಿ ಕಾರ್ಯಪ್ರವೃತ್ತವಾಯಿತು. ತಂಡವು ಮಾಹಿತಿ ಸಂಗ್ರಹಿಸಿ ನವೆಂಬರ್ 17ರಂದು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಬಂಧನದ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ಮಾಹಿತಿ ನೀಡಿದ್ದಾರೆ.

