ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ರಾಣಿ ಚೆನ್ನಮ್ಮ ಕಿರುಮೃಗಾಲಯದಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಮೂರು ತಿಂಗಳ ಹಿಂದೆಯೇ ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ ಮೃಗಾಲಯದ ಅಧಿಕಾರಿಗಳಿಗೆ ಸಂಭವನೀಯ ರೋಗ ಹರಡುವಿಕೆ ಕುರಿತು ಮುನ್ಸೂಚನೆ ನೀಡಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಯಲಹಂಕದಲ್ಲಿರುವ NIREPRID ಸಂಸ್ಥೆಯು ಸುಮಾರು ಮೂರು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಮತ್ತು ರಾಜ್ಯದ ಮೃಗಾಲಯಗಳಿಗೆ ರೋಗ ಹರಡುವಿಕೆಯ ಬಗ್ಗೆ ಮಾಹಿತಿ ರವಾನಿಸಿತ್ತು. ಅಷ್ಟೇ ಅಲ್ಲದೆ, ಬೆಳಗಾವಿ ಭಾಗದಲ್ಲಿ ಹಿಮೋರೆಜಿಕ್ ಸೆಪ್ಟಿಸಿಮೀಯಾ (ಗಳಲೆ ರೋಗ) ಕಾಯಿಲೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸುತ್ತಮುತ್ತಲಿನ ಹಸು ಮತ್ತು ಎಮ್ಮೆ ಸಾಕುವ ರೈತರಿಗೂ ಸಂದೇಶ ನೀಡಲಾಗಿತ್ತು.
ರಾಷ್ಟ್ರೀಯ ಸಂಸ್ಥೆಯು ಸ್ಪಷ್ಟವಾದ ಮಾಹಿತಿ ನೀಡಿದ ನಂತರವೂ, ಅರಣ್ಯ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯು ಈ ಗಂಭೀರ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿದೆಯೇ ಎಂಬ ಪ್ರಶ್ನೆಗಳು ಈಗ ತೀವ್ರವಾಗಿ ಮೂಡುತ್ತಿವೆ.
ಈ ದುರಂತದಲ್ಲಿ ಮೃಗಾಲಯದ ಒಟ್ಟು 38 ಕೃಷ್ಣಮೃಗಗಳ ಪೈಕಿ 31 ಪ್ರಾಣಿಗಳು ಸಾವನ್ನಪ್ಪಿದ್ದು, ಕೇವಲ 7 ಮಾತ್ರ ಬದುಕುಳಿದಿವೆ. ಬದುಕುಳಿದ ಪ್ರಾಣಿಗಳಿಗೆ ಸದ್ಯ ಆಂಟಿ ಬಯೋಟಿಕ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮೃಗಾಲಯದ ಆವರಣದಲ್ಲಿ ಔಷಧಿ ಸಿಂಪಡಣೆ ಮಾಡಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಈ ರೋಗವು ಇತರೆ ಸಾಕು ಪ್ರಾಣಿಗಳಿಗೂ ಹರಡುವ ಭೀತಿ ಇರುವುದರಿಂದ, ಮೃಗಾಲಯದ ಸುತ್ತಮುತ್ತಲಿನ ಗ್ರಾಮಗಳಿಗೂ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲಾಗಿದೆ. ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲು ಸ್ಥಳೀಯರ ಆಗ್ರಹ ಹೆಚ್ಚಾಗಿದೆ.

