ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಜನಪ್ರಿಯ ನಂದಿನಿ ಬ್ರಾಂಡ್‌ಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂದಿನಿ ತುಪ್ಪಕ್ಕೆ ಈಗ ದೇಶದೆಲ್ಲೆಡೆ ಭಾರಿ ಡಿಮ್ಯಾಂಡ್ ಇದ್ದು, ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಈ ಬಾರಿ ಹೆಚ್ಚುವರಿ ಪ್ರಮಾಣದ ತುಪ್ಪವನ್ನು ಕೇಳಿರುವುದಾಗಿ ತಿಳಿಸಿದರು.
ನಾವು 50 ರುಪಾಯಿ ಹೆಚ್ಚುವರಿ ದರಕ್ಕೆ ನಂದಿನಿ ತುಪ್ಪವನ್ನು ನೀಡುತ್ತಿದ್ದೇವೆ. ಹಿಂದೆ ಲಾಭ ಅಷ್ಟು ಹೆಚ್ಚು ಇರಲಿಲ್ಲ, ಆದರೆ ಈಗ ಸೇಲ್ಸ್ ಗಟ್ಟಿಯಾಗಿ ಹೆಚ್ಚಿದೆ. ನಂದಿನಿ ತುಪ್ಪ ಮಾತ್ರವಲ್ಲ, ಎಲ್ಲಾ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಏರಿಕೆಯಾಗಿದೆ, ಎಂದು ವಿವರಿಸಿದರು.
ಸಭೆಯೊಂದನ್ನು ಈ ತಿಂಗಳ ಕೊನೆಯಲ್ಲಿ ನಡೆಸಿ, ಬೇಡಿಕೆ ಇರುವ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಕಳೆದ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ 740 ಮೆಟ್ರಿಕ್ ಟನ್ ನಂದಿನಿ ಉತ್ಪನ್ನ ಮಾರಾಟವಾಗಿದ್ದರೆ, ಈ ಬಾರಿ ಗುರಿಯಾಗಿಸಿದ್ದ 1,000 ಮೆಟ್ರಿಕ್ ಟನ್‌ನ್ನು ಮೀರಿಸಿ 1,080 ಮೆಟ್ರಿಕ್ ಟನ್ ತುಪ್ಪ ಮಾರಾಟವಾಗಿದೆ ಎಂದು ಅವರು ತಿಳಿಸಿದರು. ಜನರು ನಂದಿನಿ ಬ್ರಾಂಡ್‌ಗೆ ತೋರಿಸಿರುವ ವಿಶ್ವಾಸವೇ ಈ ಯಶಸ್ಸಿನ ಪ್ರಮುಖ ಕಾರಣ ಎಂದರು.
ರಾಜ್ಯದ ಹೊರಗಿನ ಮಾರುಕಟ್ಟೆಯಲ್ಲಿಯೂ ನಂದಿನಿ ತುಪ್ಪಕ್ಕೆ ಬೇಡಿಕೆ ಏರಿಕೆ ಕಂಡು ಬರುತ್ತಿದ್ದು, ಬ್ರಾಂಡ್ ತನ್ನ ಗುಣಮಟ್ಟದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಸಚಿವರು ಹೇಳಿದರು.

