ಹೊಸದಿಗಂತ ವರದಿ, ಕೊಣನೂರು :
ಅರಕಲಗೂಡು ತಾಲ್ಲೂಕಿನ ಕಾವೇರಿ ನದಿ ಪಾತ್ರದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಕಟ್ಟೆಪುರ ಗ್ರಾಮದ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಗ್ರಾಮದ ಬಳಿ ಇರುವ ಕಾವೇರಿ ನದಿಯ ದಡದಲ್ಲಿ ಈ ಮೊಸಳೆ ಪ್ರತ್ಯಕ್ಷವಾಗಿದೆ. ಈ ಪ್ರದೇಶವು ನಿತ್ಯ ಜನಸಂದಣಿಯಿಂಡ ಕೂಡಿರುತ್ತದೆ. ಪ್ರತಿದಿನ ಗ್ರಾಮದ ಮಹಿಳೆಯರು ನದಿ ದಡದಲ್ಲಿ ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಬರುತ್ತಾರೆ. ಅಲ್ಲದೆ, ಸುತ್ತಮುತ್ತಲಿನ ರೈತರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಲು ಇದೇ ದಡವನ್ನು ಬಳಸುತ್ತಾರೆ. ಅಣೆಕಟ್ಟೆಯ ಬಳಿಯೇ ಜಲವಿದ್ಯುತ್ ಘಟಕ ಕೂಡ ಇರುವುದರಿಂದ ನದಿ ಪಾತ್ರದಲ್ಲಿ ಜನರ ಓಡಾಟ ಹೆಚ್ಚು.
ಇಂತಹ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿಂಡ ಸಾರ್ವಜನಿಕರು ತೀವ್ರ ಭಯಭೀತರಾಗಿದ್ದಾರೆ. ನದಿ ದಡದಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯು ಜನರ ಶಬ್ದ ಹೆಚ್ಚಾಗುತ್ತಿದ್ದಂತೆ ಪುನಃ ನದಿಯ ಆಳಕ್ಕೆ ಇಳಿದು ಹೋಗಿದೆ. ಆದರೆ, ಮೊಸಳೆ ಮತ್ತೆ ದಡಕ್ಕೆ ಬರುವ ಸಾಧ್ಯತೆ ಇದ್ದು, ಗ್ರಾಮಸ್ಥರು ನದಿ ಪಾತ್ರದಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ.
ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

