Wednesday, November 19, 2025

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ ಮುಂದೂಡಿ: ಸುಪ್ರೀಂಗೆ ಕೇರಳ ಸರ್ಕಾರ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚುನಾವಣಾ ಆಯೋಗ (IEC) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕೇರಳದಲ್ಲಿ ಆರಂಭವಾಗಿದ್ದು, ಆದ್ರೆ ಇದೀಗ ಇದನ್ನು ಮುಂದೂಡುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ (ಸರ್‌) ಪ್ರಕ್ರಿಯೆ ಮುಂದೂಡಬೇಕೆಂದು ಕೇರಳ ಸರ್ಕಾರ ಕೋರಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. ಅದೇ ಹೊತ್ತಿಗೆ ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಿದರೆ ಭದ್ರತಾ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.

2026ರ ಮೇ ತಿಂಗಳಿನಲ್ಲಿರಾಜ್ಯ ವಿಧಾನಸಭೆ ಚುನಾವಣೆ ನಡೆಯುವುದು . ಆದ್ದರಿಂದ ಎಸ್‌ಐಆರ್‌ ತುರ್ತಾಗಿ ನಡೆಸುವ ಅಗತ್ಯವಿಲ್ಲ. ತಾನು ಇಡೀ ಎಸ್‌ಐಆರ್‌ ಪ್ರಕ್ರಿಯೆಯನ್ನ ಪ್ರತ್ಯೇಕವಾಗಿ ಪ್ರಶ್ನಿಸಬಹುದಾದರೂ ಈ ಅರ್ಜಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾತ್ರ ಕೇಳುತ್ತಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಎರಡೂ ಕಾರ್ಯಗಳಿಗೆ ಭಾರೀ ಸಂಖ್ಯೆಯಲ್ಲಿ ನಾಗರಿಕ ಮತ್ತು ಭದ್ರತಾ ಸಿಬ್ಬಂದಿ ಸೇವೆ ಅಗತ್ಯವಾಗಿರುತ್ತದೆ. ಸಂವಿಧಾನಬದ್ಧವಾಗಿ ನಡೆಯಬೇಕಾದ ಚುನಾವಣೆ ಕಾರ್ಯಗಳ ನಡುವೆ ಎಸ್‌ಐಆರ್‌ ಪ್ರಕ್ರಿಯೆಯನ್ನ ತರಾತುರಿಯಲ್ಲಿ ಮತ್ತು ಅಜಾಗರೂಕತೆಯಿಂದ ಪೂರ್ಣಗೊಳಿಸುವುದು ಮತದಾರರ ಪಟ್ಟಿ ಪರಿಷ್ಕರಣೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ. ಅಲ್ಲದೇ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಮತದಾರರು ತಮ್ಮ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾದ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದೆ.

ಎಸ್‌ಐಆರ್‌ ಪೂರ್ಣಗೊಳಿಸಲು ಈಗ ಯಾವುದೇ ತುರ್ತು ಇಲ್ಲ. ಅಲ್ಲದೇ ರಾಜ್ಯದಲ್ಲಿ ಸಮಗ್ರ ಪರಿಷ್ಕರಣೆಗೆ ಭಾರತೀಯ ಚುನಾವಣಾ ಆಯೋಗ ವಿಶೇಷ ಕಾರಣಗಳನ್ನ ನೀಡಿಲ್ಲ ಎಂದು ಕೇರಳ ವಾದಿಸಿದೆ.

ರಾಜ್ಯದಲ್ಲಿ ಎಸ್‌ಐಆರ್‌ ನಡೆಸಲು ಇರುವ ವಿಶೇಷ ಅಗತ್ಯತೆಗಳನ್ನ ಚುನಾವಣಾ ಆಯೋಗ ವಿವರಿಸಿಲ್ಲ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ ಮುಂದೂಡಿದರೆ ಯಾವುದೇ ಪಕ್ಷಕಾರರಿಗೆ ಹಾನಿಯಾಗುವುದಿಲ್ಲ ಎಂದು ವಕೀಲ ಸಿ ಕೆ ಶಶಿ ಅವರ ಮೂಲಕ ಸಲ್ಲಿಸಿರುವ ಅರ್ಜಿ ತಿಳಿಸಿದೆ.

error: Content is protected !!