ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟ ಮಾಡಿದ್ದ ಆ ಒಂದು ಕೆಲಸ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ತದನಂತರ ಮಹಿಳಾ ಆಯೋಗವು ಈ ಸಂಬಂಧ ಪೊಲೀಸರಿಗೆ ಪತ್ರ ಬರೆದಿದೆ.
ಕಲಾವಿದೆ ಕುಶಲಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ.
ಅರ್ಜಿಯಲ್ಲಿ ಕಲರ್ಸ್ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಎಂಬ ಹಾಸ್ಯ ನಟನು ರಿಷಾ ಗೌಡ ಎಂಬ ಹೆಣ್ಣು ಮಗಳ ಉಡುಪನ್ನು ಬಾತ್‌ರೂಮಿನಿಂದ ತಂದು ಹೊರ ಹಾಕಿರುವುದಾಗಿ ತಿಳಿಸಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೆಣ್ಣು ಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರ ಅವರಿಗೆ ಯಾರು ಅಧಿಕಾರ ನೀಡಿರುವುದಾಗಿ ಇದರಿಂದ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ಪ್ರಸಾರ ಮಾಡಲು ಹೊರಟಿರುವುದಾಗಿ ತಿಳಿಸುತ್ತಾ, ಕಲರ್ಸ್ ಶೋವನ್ನು ನಿಲ್ಲಿಸಬೇಕೆಂದು ಆಯೋಗದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿರುತ್ತಾರೆ. ಆದ್ದರಿಂದ ಅರ್ಜಿದಾರರ ಅರ್ಜಿಯಲ್ಲಿನ ವಿಷಯದ ಕುರಿತು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಅತೀ ಜರೂರಾಗಿ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಕೋರಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗಿಲ್ಲಿ ಮಾಡಿದ ಮಿಸ್ಟೇಕ್ ಏನು?
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ರಿಷಾ ಗೌಡ ಮತ್ತು ಗಿಲ್ಲಿ ನಟನ ನಡುವೆ ಬಕೆಟ್ ವಿಚಾರಕ್ಕೆ ಜಗಳವಾಗಿತ್ತು. ಗಿಲ್ಲಿ ಎಷ್ಟೇ ಬೇಡಿಕೊಂಡರೂ ರಿಷಾ ಬಕೆಟ್ ಕೊಟ್ಟಿರಲಿಲ್ಲ. ಆಗ ಕೆರಳಿದ ಗಿಲ್ಲಿ, ರಿಷಾ ಗೌಡ ಅವರ ಬಟ್ಟೆಗಳನ್ನು ಬಾತ್ ರೂಮ್ ಏರಿಯಾದಲ್ಲಿ ತಂದುಹಾಕಿದ್ದರು. ಇದನ್ನು ಕಂಡ ರಿಷಾ ರೊಚ್ಚಿಗೆದ್ದು ಕೂಗಾಡಿ, ಗಿಲ್ಲಿಗೆ ಹೊಡೆದಿದ್ದರು.

