ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಲ ಪೂಜೆಗೆ ತೆರೆಯಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿಯೂ ಜೋರಾಗಿದೆ. ಈ ವೈರಸ್ ಕರ್ನಾಟಕಕ್ಕೂ ಟೆನ್ಷನ್ ಹೆಚ್ಚಿಸಿದ್ದು, ಸದ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಅಯ್ಯಪ್ಪ ಭಕ್ತರಿಗಾಗಿ ಮಾರ್ಗಸೂಚಿ (ಬಿಡುಗಡೆ ಮಾಡಿದೆ.
ಕೇರಳದಲ್ಲಿ ಈಗಾಗಲೇ ನೂರಾರು ಜನರಿಗೆ ಬಾಧಿಸುತ್ತಿರುವ ಈ ವೈರಸ್, ಹೀಗಾಗಿ ರಾಜ್ಯದ ಶಬರಿಮಲೆ ಯಾತ್ರಿಕರಿಗೆ ರಾಜ್ಯದ ಆರೋಗ್ಯ ಇಲಾಖೆ ಮಂಗಳವಾರ ಸಲಹಾ ಮಾರ್ಗಸೂಚಿಯನ್ನು ಹೊರಡಿಸಿದೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನಿದೆ?
ನೇಗ್ಲೇರಿಯಾ ಫೌಲೇರಿ ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ . ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ನಿಂತ ನೀರು, ಕೊಳ/ಈಜು ಕೊಳಗಳು ಹಾಗೂ ಕೆರೆಗಳಲ್ಲಿ ವಾಸ ಮಾಡುತ್ತೆ.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.
ನೆಗ್ಲೇರಿಯಾ ಫೌಲರಿ ಅತ್ಯಂತ ವಿಷಕಾರಿ ಸೂಕ್ಷ್ಮ ಜೀವಿ. ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಲಿದೆ . ಅಮೀಬಿಕ್ ಮೆನಿಂಗೊಎನ್ನೆಫಲೈಟಿಸ್ ಎನ್ನುವ ಅಪರೂಪದ ಗಂಭೀರ/ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸಿ. ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿಯುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆ ಪಡೆಯಲು ಸಮೀಪದ ಸರ್ಕಾರಿ ಆಸ್ಪತ್ರೆ, ವೈದ್ಯರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

