ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಕುರಿತು ಭಾರತ ಮೊದಲ ಪ್ರತಿಕ್ರಿಯೆ ನೀಡಿದ್ದು, ಈ ತೀರ್ಪನ್ನು ಭಾರತ ಗಮನಿದೆ ಎಂದು ಹೇಳಿದೆ ಆದರೆ, ಹಸೀನಾರನ್ನು ಬಾಂಗ್ಲದೇಶಕ್ಕೆ ಒಪ್ಪಿಸುವ ಕುರಿತು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ.
ಹಸೀನಾ ವಿರುದ್ದ ಬಾಂಗ್ಲಾ ನ್ಯಾಯಲಯ ತೀರ್ಪು ಹೊರಡಿಸಿ ಮರಣದಂಡನೆ ನೀಡಿದ್ದು, ಈ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
‘ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಘೋಷಿಸಿದ ತೀರ್ಪನ್ನು ಭಾರತ ಗಮನಿಸಿದೆ. ನಿಕಟ ನೆರೆಯ ರಾಷ್ಟ್ರವಾಗಿ, ಭಾರತವು ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ, ಅದರಲ್ಲಿ ಶಾಂತಿ, ಪ್ರಜಾಪ್ರಭುತ್ವ, ಸೇರ್ಪಡೆ ಮತ್ತು ಸ್ಥಿರತೆ ಸೇರಿವೆ. ಆ ನಿಟ್ಟಿನಲ್ಲಿ ನಾವು ಯಾವಾಗಲೂ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುತ್ತೇವೆ’ ಎಂದು ಹೇಳಿದೆ.
ಆದರೆ ಬಾಂಗ್ಲಾದಲ್ಲಿ ಕಳೆದ ವರ್ಷ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದ ತನ್ನ ದೇಶ ತೊರೆದು ಭಾರತಕ್ಕೆ ಬಂದು ದೆಹಲಿಯ ನಿಗೂಢ ಸ್ಥಳದಲ್ಲಿ ಆಶ್ರಯ ಪಡೆಯುತ್ತಿರುವ ಹಸೀನಾರನ್ನು ಭಾರತದಿಂದ ಗಡೀಪಾರು ಮಾಡಿ ಬಾಂಗ್ಲಾದೇಶಕ್ಕೆ ಒಪ್ಪಿಸಬೇಕು ಎಂಬ ಮನವಿಯ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಕಳೆದ ಡಿಸೆಂಬರ್‌ನಿಂದಲೂ ಬಾಂಗ್ಲಾದೇಶ ಈ ಮನವಿಯನ್ನು ಮಾಡುತ್ತಿದ್ದರು ಸಹ ಭಾರತ ಈವರೆಗೂ ಈ ಮನವಿಗೆ ಸ್ಪಂದಿಸಿಲ್ಲ. ಅಂತಯೇ ಭಾರತ ಈಗಲೂ ಬಾಂಗ್ಲಾದ ಆಂತರಿಕ ವಿಷಯದಲ್ಲಿ ಯಾವುದೇ ನಿಲುವನ್ನು ಕಾಯ್ದುಕೊಂಡಿಲ್ಲ.
ಕಳೆದ ವರ್ಷ ಜೂನ್ ನಲ್ಲಿ ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರದ ಭ್ರಷ್ಟಾಚಾರಗಳನ್ನು ಖಂಡಿಸಿ ಭುಗಿಲೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ನಂತರ ಹಸೀನಾ ತನ್ನ ಆಪ್ತರೊಂದಿಗೆ ಸೇರಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ.17ರಂದು ವಿಚಾರಣೆ ನಡೆಸಿದ ಬಾಂಗ್ಲಾದೇಶದ ವಿಶೇಷ ನ್ಯಾಯಲಯ “ಮಾನವೀಯತೆ ವಿರುದ್ಧ ಶೇಖ್ ಹಸೀನಾ ನಡೆಸಿರುವ ಅಪರಾಧಗಳು ಗರಿಷ್ಠ ಶಿಕ್ಷೆಗೆ ಅರ್ಹ” ಎಂದು ಹೇಳಿ ಗಲ್ಲು ಶಿಕ್ಷೆ ವಿಧಿಸಿದೆ.

