Saturday, November 22, 2025

3 ದಿನ ಡೆಲ್ಲಿಯಲ್ಲಿದ್ದರೂ ರಾಹುಲ್ ದರ್ಶನವಿಲ್ಲ: ಡಿಕೆಶಿ ‘ಪವರ್ ಗೇಮ್’ನ ಇನ್‌ಸೈಡ್ ಸ್ಟೋರಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದ ಗಮನ ಸೆಳೆದಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೂರು ದಿನಗಳ ದೆಹಲಿ ಪ್ರವಾಸವು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಮೂರು ದಿನಗಳ ಕಾಲ ಬೀಡುಬಿಟ್ಟಿದ್ದರೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಡಿಕೆಶಿ ಭೇಟಿಯಾಗದಿರುವುದು ನಾನಾ ರಾಜಕೀಯ ಊಹಾಪೋಹಗಳಿಗೆ ವೇದಿಕೆ ಕಲ್ಪಿಸಿದೆ.

ಆದರೆ, ರಾಹುಲ್ ಭೇಟಿಯಾಗದಿದ್ದರೂ ಡಿಕೆಶಿ ಅವರು ದೆಹಲಿಯಲ್ಲಿ ‘ಚೆಕ್ ಮೇಟ್’ನಂತಹ ರಾಜಕೀಯ ಆಟ ಆಡಿದ್ದಾರೆ ಎಂಬ ಇನ್‌ಸೈಡ್ ಮಾಹಿತಿ ಈಗ ಲಭ್ಯವಾಗಿದೆ. ಈ ಮೂರು ದಿನಗಳ ಡೆಲ್ಲಿ ಟೂರ್‌ನಲ್ಲಿ ನಡೆದ ರಾಜಕೀಯ ತಂತ್ರಗಾರಿಕೆ ಹೀಗಿದೆ:

ರಹಸ್ಯ ಸಭೆ ಮತ್ತು ‘ತ್ಯಾಗ’ದ ನೆನಪು

ಮಾಹಿತಿಗಳ ಪ್ರಕಾರ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿ ಗಡಿ ಮತ್ತು ನೋಯ್ಡಾ ಗಡಿಯ ಸಮೀಪಕ್ಕೆ ಎರಡು ಬಾರಿ ರಹಸ್ಯವಾಗಿ ತೆರಳಿದ್ದಾರೆ. ಈ ರಹಸ್ಯ ಪ್ರವಾಸದಲ್ಲಿ ಅವರು ಕಾಂಗ್ರೆಸ್‌ನ ಓರ್ವ ಪವರ್ ಫುಲ್ ನಾಯಕರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಡಿಕೆಶಿ ಅವರು, ರಾಜ್ಯದಲ್ಲಿ ಪಕ್ಷಕ್ಕಾಗಿ ತಾವು ಮಾಡಿದ ‘ತ್ಯಾಗ’ವನ್ನು ನೆನಪಿಸಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಅಧಿಕಾರ ಹಂಚಿಕೆ ಕುರಿತು ಪ್ರಸ್ತಾಪ ಮಾಡಿದ್ದಾರೆ.

ಅಧಿಕಾರ ಹಂಚಿಕೆಗೆ ಖರ್ಗೆ ಸೂಚನೆ

ರಹಸ್ಯ ಸಭೆಯ ನಂತರ, ಡಿಕೆಶಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಅಧಿಕಾರ ಹಂಚಿಕೆಯ ತಮ್ಮ ಬೇಡಿಕೆಗೆ ಮತ್ತೊಮ್ಮೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಸದ್ಯಕ್ಕೆ ಕೆಲ ದಿನಗಳ ಕಾಲ ಕಾಯುವಂತೆ ಡಿಕೆಶಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್‌ನಲ್ಲಿ ನಿರ್ಧಾರ?

ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಸಹೋದರರಿಗೆ ಡಿಸೆಂಬರ್ ತಿಂಗಳು ಡಿಸೈಡಿಂಗ್ ತಿಂಗಳು ಆಗಲಿದೆ ಎಂಬ ಸುಳಿವು ಸಿಕ್ಕಿದೆ. ಮುಂಬರುವ ಸಂಸತ್ತಿನ ಅಧಿವೇಶನದ ವೇಳೆಯಲ್ಲಿಯೇ ಅಧಿಕಾರ ಹಂಚಿಕೆಯ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವನೆಯೂ ಈ ರಾಜಕೀಯ ಮಾತುಕತೆಗಳಲ್ಲಿ ಆಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಡಿಕೆಶಿಯವರ ದೆಹಲಿ ಪ್ರವಾಸವು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಹೈಡ್ರಾಮಾಗೆ ಮುನ್ನುಡಿ ಬರೆದಿದೆ.

error: Content is protected !!