ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಭೇಟಿ ಬಳಿಕ ಇದೀಗ ತಾಲಿಬಾನ್ ಆಡಳಿತದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅಜೀಜಿ ಭಾರತಕ್ಕೆ ಭೇಟಿ ನೀಡಿದ್ದಾರೆ.
ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಹೆಚ್ಚಿಸುವ ಗುರಿಯೊಂದಿಗೆ ಬುಧವಾರ ಅವರು ದೆಹಲಿಗೆ ಆಗಮಿಸಿದರು.
ಇತ್ತೀಚಿನ ಸಂಘರ್ಷದ ನಂತರ ಅಪ್ಘಾನಿಸ್ತಾನ ಜೊತೆಗಿನ ಪ್ರಮುಖ ಭೂ ಗಡಿಯನ್ನು ಪಾಕಿಸ್ತಾನ ಬಂದ್ ಮಾಡಿದೆ. ಇದರಿಂದ ಅಫ್ಘಾನ್ ರಫ್ತುದಾರರಿಗೆ, ವಿಶೇಷವಾಗಿ ಹಣ್ಣಿನ ವ್ಯಾಪಾರಿಗಳಿಗೆ ಭಾರೀ ನಷ್ಟವನ್ನುಂಟುಮಾಡಿದೆ.ಪಾಕಿಸ್ತಾನದೊಂದಿಗೆ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿರುವಂತೆಯೇ ಅಪ್ಘಾನಿಸ್ತಾನ ವಾಣಿಜ್ಯ ಸಚಿವರು ಇದೀಗ ಭಾರತಕ್ಕೆ ಭೇಟಿ ನೀಡಿದ್ದಾರೆ.
‘ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಸುಧಾರಿಸುವುದು ಭೇಟಿಯ ಪ್ರಮುಖ ಉದ್ದೇಶವಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಬುಧವಾರ ಸಚಿವರ ನೇತೃತ್ವದ ಅಪ್ಘಾನ್ ಉನ್ನತ ಮಟ್ಟದ ನಿಯೋಗ ಭಾರತದ ವ್ಯಾಪಾರ ಪ್ರಚಾರ ಸಂಸ್ಥೆಗೆ (ITPO) ಭೇಟಿ ನೀಡಿತು. ಅಪ್ಘಾನ್ ಸ್ಥಳೀಯ ಮಳಿಗೆಗಳಿಗೆ ಭೇಟಿ ನೀಡಿದ ಅಜೀಜ ಅವರಿಗೆ ಐಟಿಪಿಒ ವ್ಯವಸ್ಥಾಪಕ ನಿರ್ದೇಶಕರು ಮೇಳದಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದರು.

