Saturday, November 22, 2025

ಶಬರಿಮಲೆ ಯಾತ್ರಿಕರೇ ಎಚ್ಚರ! ಆರೋಗ್ಯ ಇಲಾಖೆಯಿಂದ ತುರ್ತು ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಯಾತ್ರೆ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ರಾಜ್ಯದ ಹಲವು ಭಾಗಗಳಿಂದ ಅಯ್ಯಪ್ಪ ದರ್ಶನಕ್ಕಾಗಿ ಇರುಮುಡಿ ಹೊತ್ತ ಭಕ್ತರು ಪ್ರಯಾಣ ಆರಂಭಿಸಿದ್ದಾರೆ. ಆದರೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರಿಗೆ ಆರೋಗ್ಯ ಇಲಾಖೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.

ನೆರೆಯ ಕೇರಳ ಸರ್ಕಾರದಿಂದ ‘ಮಿದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ನೇಗ್ಲೇರಿಯಾ ಫೌಲೆರಿ ಕುರಿತ ಸುರಕ್ಷತಾ ಮಾರ್ಗಸೂಚಿ ಹೊರಬಿದ್ದ ಹಿನ್ನೆಲೆ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಯಾತ್ರಿಕರು ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಸೂಚಿಸಿದೆ.

ನಿಂತ ನೀರು, ಕೆರೆ, ಕೊಳ ಹಾಗೂ ಮಣ್ಣಿನಲ್ಲಿ ಕಾಣುವ ನೇಗ್ಲೇರಿಯಾ ಫೌಲೆರಿ ಮಾನವರ ನಡುವೆ ಹರಡುವುದಿಲ್ಲ. ಆದರೆ ನೀರು ಮೂಗಿನಿಂದ ಒಳನುಗ್ಗಿದರೆ ಇದು ಮೆದುಳಿನವರೆಗೆ ತಲುಪಿ, ಅಪರೂಪದ ಆದರೆ ಅತ್ಯಂತ ಮಾರಕವಾದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಕಾಯಿಲೆಯನ್ನು ಉಂಟುಮಾಡಬಹುದು. ಇದರಿಂದಾಗಿ ಯಾತ್ರೆಯ ಸಮಯದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಮೂಗಿನಲ್ಲಿ ಹೋಗದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸಿ ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿಕೊಳ್ಳುವಂತೆ ಸೂಚಿಸಲಾಗಿದೆ.

ಯಾತ್ರೆಗೆ ಹೋದ ಬಳಿಕ ಏಳು ದಿನಗಳ ಒಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ವರ್ತನೆಯಲ್ಲಿ ಬದಲಾವಣೆ ಸೇರಿದಂತೆ ಯಾವುದೇ ಅಸ್ವಸ್ಥ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಬೇಕು ಎಂದು ಇಲಾಖೆ ಎಚ್ಚರಿಸಿದೆ. ಶಬರಿಮಲೆ ಯಾತ್ರಿಕರ ಸುರಕ್ಷತೆಗಾಗಿ ಆರೋಗ್ಯ ಇಲಾಖೆ ನೀಡಿರುವ ಈ ಸಲಹೆ, ಅಪರೂಪದ ಗಂಭೀರ ಸೋಂಕಿನಿಂದ ಭಕ್ತರನ್ನು ರಕ್ಷಿಸುವ ಮಹತ್ವದ ಕ್ರಮವೆಂದು ಪರಿಗಣಿಸಲಾಗಿದೆ.

error: Content is protected !!