ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಸಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪ್ರಸ್ತುತ ಶಾಸಕ ಸುಧಾಕರ್ ಸಿಂಗ್ ಇಂದು ಲಕ್ನೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಧನರಾದರು. ಕೆಲವು ದಿನಗಳ ಹಿಂದೆ ಅವರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಪ್ರಯತ್ನ ಫಲಿಸದೆ ಅವರು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಾರಾ ಸಿಂಗ್ ಅವರನ್ನು ಸೋಲಿಸಿ ಶಾಸಕ ಸ್ಥಾನಕ್ಕೇರಿದ್ದ ಸುಧಾಕರ್ ಸಿಂಗ್ ಅವರ ಅಕಾಲಿಕ ನಿಧನವು ಘೋಸಿ ಕ್ಷೇತ್ರ ಹಾಗೂ ಸಮಾಜವಾದಿ ಪಕ್ಷದಲ್ಲಿ ಆಘಾತ ಮೂಡಿಸಿದೆ. ಪಕ್ಷದ ಹಾಲಿ ನಾಯಕರಿಂದ ಹಿಡಿದು ಕಾರ್ಯಕರ್ತರು, ಮತದಾರರು ಆಘಾತಕ್ಕೊಳಗಾಗಿದ್ದರೆ. ಅವರ ಸೇವಾ ಮನೋಭಾವ, ಜನಪ್ರಿಯತೆ ಮತ್ತು ಸರಳ ನಡೆ-ನುಡಿಗಳು ಜನಮನದಲ್ಲಿ ದೀರ್ಘಕಾಲ ನೆನಪಾಗಿ ಉಳಿಯಲಿವೆ.

