ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅಂತಾರಾಷ್ಟ್ರೀಯ ತಾರೆ ಪ್ರಿಯಾಂಕಾ ಚೋಪ್ರಾ ಜೋನಸ್ ಮತ್ತೆ ಭಾರತೀಯ ಸಿನಿರಂಗಕ್ಕೆ ಭರ್ಜರಿ ವಾಪಸಿಗೆ ಸಜ್ಜಾಗಿದ್ದಾರೆ. ಹಲವು ವರ್ಷಗಳ ನಂತರ, ಅವರು ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹತ್ವಾಕಾಂಕ್ಷಿ ಸಿನಿಮಾದ ಮೂಲಕ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಪ್ರಿಯಾಂಕಾ ಈ ಬಾರಿ ತಮ್ಮ ಪಾತ್ರಕ್ಕೆ ತೆಲುಗಿನಲ್ಲಿ ತಾವೇ ಡಬ್ಬಿಂಗ್ ಮಾಡುವ ಸವಾಲನ್ನು ಸ್ವೀಕರಿಸಿದ್ದು, ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಕಿದೆ.
ಟೈಟಲ್ ಟೀಸರ್ ಬಿಡುಗಡೆಯಾದ ನಂತರ ಚಿತ್ರಕ್ಕೆ ಸಂಬಂಧಿಸಿದ ಕುತೂಹಲ ಹೆಚ್ಚಾಗಿದ್ದು, ಅಭಿಮಾನಿಗಳೊಬ್ಬರು “ನೀವು ತೆಲುಗಿನಲ್ಲಿ ಸ್ವತಃ ಡಬ್ಬಿಂಗ್ ಮಾಡುತ್ತೀರಾ?” ಎಂದು ಕೇಳಿದ ಪ್ರಶ್ನೆಗೆ ನಟಿ “ಹೌದು, ನಾನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೇನೆ” ಎಂದು ಉತ್ತರಿಸಿದ ಬಳಿಕ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಿಯಾಂಕಾ ತೆಲುಗು ಭಾಷೆಯನ್ನು ಕಲಿಯುವುದು ದೊಡ್ಡ ಸವಾಲಾಗಿದ್ದರೂ, ರಾಜಮೌಳಿ ನೀಡುತ್ತಿರುವ ಮಾರ್ಗದರ್ಶನದಿಂದ ಆತ್ಮವಿಶ್ವಾಸ ಹೆಚ್ಚುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾಷೆಯ ಕಠಿಣತೆಯ ನಡುವೆಯೂ ಡಬ್ಬಿಂಗ್ ಹಾಗೂ ಅಭಿನಯವನ್ನು ಸಮನಾಗಿ ನಿರ್ವಹಿಸುವುದು ತಮ್ಮ ಗುರಿಯೆಂದು ಹೇಳಿದ್ದಾರೆ.
ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

