Friday, November 21, 2025

ದರೋಡೆಕೋರರಿಗೆ ‘ಪಾಠ’ ಕಲಿಸುವಲ್ಲಿ ವಿಫಲರಾದ ಗೃಹ ಸಚಿವರ ವಿರುದ್ಧ ನಿಖಿಲ್ ಗುಡುಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾಮಾನ್ಯ ಜನರಿಗೆ ನೆಮ್ಮದಿ ಮತ್ತು ರಕ್ಷಣೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಡಳಿತಾರೂಢ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಾಡುಹಗಲೇ ದರೋಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಕಳೆದ ಎರಡೂವರೆ ವರ್ಷಗಳಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪ್ರತಿದಿನ ನಾವು ಹಲವು ಅಪರಾಧ ಪ್ರಕರಣಗಳನ್ನು ನೋಡುತ್ತಿದ್ದೇವೆ. ಆದರೆ, ಗೃಹ ಸಚಿವರನ್ನು ಏನೇ ಕೇಳಿದರೂ ‘ಗೊತ್ತಿಲ್ಲ’ ಎನ್ನುವ ಉತ್ತರ ಬರುತ್ತದೆ. ಇದು ದಿಕ್ಕು-ದೆಸೆ ಇಲ್ಲದ ಸರ್ಕಾರ ಎಂಬುದಕ್ಕೆ ಸ್ಪಷ್ಟ ಉದಾಹರಣೆ,” ಎಂದು ನಿಖಿಲ್ ಅವರು ಟೀಕಿಸಿದರು.

ಆಡಳಿತ ವೈಫಲ್ಯದ ಪಾಠ:

ರಾಜ್ಯದ ಜನತೆ ಆತಂಕ ಪಡುವ ವಿಚಾರ ಇದಾಗಿದ್ದು, ಗೃಹ ಸಚಿವರು ಈ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸರ್ಕಾರದ ಆಡಳಿತ ವೈಫಲ್ಯದಿಂದಾಗಿ, ರೌಡಿಗಳು, ದರೋಡೆಕೋರರು ಮತ್ತು ಕಳ್ಳತನ ಮಾಡುವವರಿಗೆ ಪಾಠ ಕಲಿಸುವ ಕೆಲಸ ನಡೆಯುತ್ತಿಲ್ಲ. ಇದು ಆ ಅಪರಾಧಿಗಳಿಗೆ ಮತ್ತಷ್ಟು ಮೋಟಿವೇಷನ್ ನೀಡಿದಂತಾಗುತ್ತದೆ.

ಈ ಪರಿಸ್ಥಿತಿಗೆ ತಕ್ಷಣವೇ ಕಡಿವಾಣ ಹಾಕುವ ಕೆಲಸ ಆಗಬೇಕು. ಗೃಹ ಸಚಿವರು ಈ ಗಂಭೀರ ಪರಿಸ್ಥಿತಿಯನ್ನು ಅರಿತು, ಘಟನೆಯ ಬಗ್ಗೆ ಸಂಪೂರ್ಣ ಉತ್ತರ ನೀಡಬೇಕು. ಅಲ್ಲದೆ, ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಹೇಗೆ ಎಚ್ಚರವಹಿಸಲಾಗುತ್ತದೆ ಎಂಬುದರ ಕುರಿತು ಸರ್ಕಾರವು ರಾಜ್ಯದ ಜನತೆಗೆ ಸ್ಪಷ್ಟ ಭರವಸೆ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

error: Content is protected !!