Friday, November 21, 2025

ಡಿಸೆಂಬರ್ 4ಕ್ಕೆ ಸೇಲಂನಲ್ಲಿ ಟಿವಿಕೆ ರ‍್ಯಾಲಿ? ಅನುಮತಿ ಕೋರಿ ಪೊಲೀಸ್ ಮೊರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ದುರಂತದ ನಂತರ, ನಟ ಕಮ್ ರಾಜಕಾರಣಿ ವಿಜಯ್ ನೇತೃತ್ವದ ಪಕ್ಷವು ಇದೀಗ ಮತ್ತೊಂದು ಸಾರ್ವಜನಿಕ ಸಭೆಗೆ ಸಿದ್ಧತೆ ನಡೆಸಿದೆ. ಈ ಭೀಕರ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರೂ, ಪಕ್ಷವು ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಲು ದೃಢ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ.

ಮುಂದಿನ ಡಿಸೆಂಬರ್ 4 ರಂದು ಸೇಲಂ ಜಿಲ್ಲೆಯಲ್ಲಿ ಬೃಹತ್ ಸಾರ್ವಜನಿಕ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಟಿವಿಕೆ ಪಕ್ಷವು ಸೇಲಂ ಪೊಲೀಸರ ಮೊರೆ ಹೋಗಿದೆ. ಟಿವಿಕೆ ಪಕ್ಷದ ಸೇಲಂ ಜಿಲ್ಲಾ ಕಾರ್ಯದರ್ಶಿ ಅವರು ಈ ಸಂಬಂಧ ಸೇಲಂ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೋಸ್ ಮೈದಾನ, ಫೋರ್ಟ್ ಮೈದಾನ ಅಥವಾ ಸೀಲನಾಯಕೆನ್ಪಟ್ಟಿ ಪ್ರದೇಶಗಳ ಪೈಕಿ ಯಾವುದಾದರೂ ಒಂದು ಸೂಕ್ತ ಸ್ಥಳದಲ್ಲಿ ಸಮಾವೇಶಕ್ಕೆ ಅವಕಾಶ ನೀಡಿ, ಅಗತ್ಯ ಭದ್ರತೆ ಕಲ್ಪಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ದುರಂತದ ನಡತೆಯಲ್ಲೂ ಮುಂದುವರಿದ ವಿಜಯ್‌ ರಾಜಕೀಯ ಕನಸು

ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿ ರಾಜಕೀಯದಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಇದರ ಭಾಗವಾಗಿ ಅವರು ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದಾರೆ.

ಕರೂರಿನಲ್ಲಿ ನಡೆದ ಹಿಂದಿನ ರ‍್ಯಾಲಿಯು ವಿಜಯ್ ಅವರ ಅಭಿಮಾನಿಗಳ ಅಪಾರ ಸಂಖ್ಯೆಯ ನಡುವೆ ಗೊಂದಲ ಮತ್ತು ಕಾಲ್ತುಳಿತಕ್ಕೆ ಕಾರಣವಾಗಿ, 41 ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ತಮ್ಮ ನಾಯಕನಿಗಾಗಿ ಸುಮಾರು 7 ಗಂಟೆಗಳ ಕಾಲ ಕಾದು ಕುಳಿತಿದ್ದ ಜನಸಮೂಹ, ವಿಜಯ್ ತಡವಾಗಿ ಆಗಮಿಸಿದ್ದರಿಂದ ತಾಳ್ಮೆ ಕಳೆದುಕೊಂಡಿದ್ದರು ಎನ್ನಲಾಗಿದೆ.

ಈ ದುರಂತವು ತಮಿಳುನಾಡು ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಯ ನಂತರ, ಟಿವಿಕೆ ಪಕ್ಷವು ರಾಜ್ಯ ಸರ್ಕಾರದ ಪರಿಹಾರದ ಜೊತೆಗೆ ಮೃತ ಕುಟುಂಬಗಳಿಗೆ ಪ್ರತ್ಯೇಕವಾಗಿ ಪರಿಹಾರ ಘೋಷಿಸಿತ್ತು. ಅಲ್ಲದೆ, ವಿಜಯ್ ಅವರು ಸ್ವತಃ ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಟಿವಿಕೆ ಪಕ್ಷವು ಮತ್ತೊಂದು ಬೃಹತ್ ರ‍್ಯಾಲಿಗೆ ಅನುಮತಿ ಕೋರಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ ಮತ್ತು ಮುಂಬರುವ ಕಾರ್ಯಕ್ರಮದ ಸುರಕ್ಷತೆ ಬಗ್ಗೆ ಆತಂಕಗಳು ಮೂಡಿವೆ.

error: Content is protected !!