ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಅವರು ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದಾರೆ. ಅವರನ್ನು ಇಷ್ಟಪಡುವ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ. ಆದರೆ ನಟ ವಿವೇಕ್ ಒಬೆರಾಯ್ , ಇದೆಲ್ಲವೂ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಶಾರುಖ್ ಖಾನ್ ಯಾರು ಎಂಬುದನ್ನೇ ಜನರು ಮರೆಯುತ್ತಾರೆ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ , 1960ರ ದಶಕದಲ್ಲಿ ಯಾವುದಾದರೊಂದು ಸಿನಿಮಾದಲ್ಲಿ ನಟಿಸಿದ ಕಲಾವಿದರ ಬಗ್ಗೆ ಇಂದಿನ ತಲೆಮಾರಿನವರಿಗೆ ಕೇಳಿ ನೋಡಿ. ಯಾರಿಗೂ ತಿಳಿದಿಲ್ಲ. ಇತಿಹಾಸದಿಂದ ನೀವು ಅನಿವಾರ್ಯವಾಗಿ ದೂರ ಸರಿಯುತ್ತೀರಿ. 2050ರಲ್ಲಿ ಶಾರುಖ್ ಖಾನ್ ಯಾರು ಅಂತ ಜನರು ಕೇಳಬಹುದು ಎಂದು ಹೇಳಿದ್ದಾರೆ.
ವಿವೇಕ್ ಒಬೆರಾಯ್ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ರಣಬೀರ್ ಕಪೂರ್ ತಾತ ರಾಜ್ ಕಪೂರ್ ಅವರ ಹೆಸರನ್ನು ಹೇಳಿದ್ದಾರೆ. ‘ಇಂದಿನ ತಲೆಮಾರಿನವರು ರಾಜ್ ಕಪೂರ್ ಯಾರು ಅಂತ ಕೇಳುತ್ತಾರೆ. ನಾವು, ನೀವು ಅವರನ್ನು ಸಿನಿಮಾದ ದೇವರು ಅಂತ ಕರೆಯುತ್ತೇನೆ. ಆದರೆ ಇಂದು ರಣಬೀರ್ ಕಪೂರ್ ಅವರ ಅಭಿಮಾನಿಗಳಿಗೆ ಕೇಳಿದರೆ ರಾಜ್ ಕಪೂರ್ ಯಾರು ಎಂಬುದೇ ಅವರಿಗೆ ತಿಳಿದಿರುವುದಿಲ್ಲ’ ಎಂದರು.
ವಿವೇಕ್ ಒಬೆರಾಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಕೈಯಲ್ಲಿ ಹಲವು ಅವಕಾಶಗಳು ಇವೆ. ನವೆಂಬರ್ 21ರಂದು ಬಿಡುಗಡೆ ಆಗಲಿರುವ ‘ಮಸ್ತಿ 4’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದಲ್ಲೂ ವಿವೇಕ್ ಒಬೆರಾಯ್ ಅವರು ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡುತ್ತಿದ್ದಾರೆ.

