ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರತಿಷ್ಠಿತ ದೇಶೀಯ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ಕ್ಕೆ ಕರ್ನಾಟಕ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ನವೆಂಬರ್ 26ರಿಂದ ಡಿಸೆಂಬರ್ 8ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಎಲೈಟ್ ಗ್ರೂಪ್–ಡಿ ಪಂದ್ಯಗಳಲ್ಲಿ ಕರ್ನಾಟಕ ತಮಿಳುನಾಡು, ದೆಹಲಿ, ಸೌರಾಷ್ಟ್ರ, ಉತ್ತರಾಖಂಡ್, ರಾಜಸ್ಥಾನ ಹಾಗೂ ತ್ರಿಪುರ ತಂಡಗಳ ಜೊತೆ ಸ್ಪರ್ಧಿಸಲಿದ್ದು, ಮೈದಾನಕ್ಕಿಳಿಯಲು ಸಜ್ಜಾಗಿದೆ.
ಕರ್ನಾಟಕ ತಂಡವನ್ನು ಅನುಭವಿ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಸೇರಿದಂತೆ 16 ಮಂದಿ ಆಟಗಾರರಿಗೆ ಸ್ಥಾನ ನೀಡಲಾಗಿದೆ. ವಿಶೇಷವಾಗಿ ಕರುಣ್ ನಾಯರ್ ರಣಜಿ ಟ್ರೋಫಿಯಲ್ಲಿ ಎರಡು ಶತಕಗಳೊಂದಿಗೆ 602 ರನ್ ಕಲೆ ಹಾಕಿದ್ದಾರೆ.
ಇದೇ ವೇಳೆ, ಪಡಿಕ್ಕಲ್‌ರ ಲಭ್ಯತೆ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಭಾಗವಾಗಿರುವುದರಿಂದ, ಗುಹಾಹಟಿ ಟೆಸ್ಟ್‌ನಲ್ಲಿ ಆಡಿದರೆ ಕರ್ನಾಟಕದ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಭಾರತ ತಂಡವು ಅವರನ್ನು ಬಿಡುಗಡೆ ಮಾಡಿದರೆ ಮಾತ್ರ ಕರ್ನಾಟಕದ ಮೊದಲ ಪಂದ್ಯದಿಂದಲೇ ಆಪ್ಷನ್ ಲಭ್ಯವಾಗಲಿದೆ.
ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಉತ್ತರಾಖಂಡ್ ವಿರುದ್ಧ ಆಡಲಿದ್ದು, ಉತ್ತಮ ಸಮತೋಲನ ಹೊಂದಿದ ತಂಡದೊಂದಿಗೆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ನಂಬಿಕೆ ಮೂಡಿಸಿದೆ.
ಕರ್ನಾಟಕ ತಂಡ ಹೀಗಿದೆ:
ಮಯಾಂಕ್ ಅಗರ್ವಾಲ್ (ನಾಯಕ), ಮೆಕ್‌ನೀಲ್ ನೊರೊನ್ಹಾ, ದೇವದತ್ ಪಡಿಕ್ಕಲ್, ಕೆಎಲ್ ಶ್ರೀಜಿತ್, ಕರುಣ್ ನಾಯರ್, ಆರ್. ಸ್ಮರಣ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಖ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶ್ರೀವತ್ಸ ಆಚಾರ್ಯ, ಶುಭಾಂಗ್ ಹೆಗ್ಡೆ, ಪ್ರವೀಣ್ ದುಬೆ, ಬಿ.ಆರ್ ಶರತ್.

