ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಬಂಧಿಸುವ ಬೆದರಿಕೆ ಹಾಕಿದ್ದರಿಂದ ಭಯಭೀತರಾದ 83 ವರ್ಷದ ನಿವೃತ್ತ ಸೇನಾ ಕರ್ನಲ್ ಒಬ್ಬರು ₹56.05 ಲಕ್ಷ ಕಳೆದುಕೊಂಡಿದ್ದಾರೆ.
ಈ ಸಂಬಂಧ ನವೆಂಬರ್ 18 ರಂದು ಕೇಂದ್ರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಅಕ್ಟೋಬರ್ 27 ರಂದು ಕರೆ ಮಾಡಿದ ವ್ಯಕ್ತಿಯೊಬ್ಬ ಸಂತ್ರಸ್ತರಿಗೆ ತಾನು ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಪಿಶೆ ಎಂದು ಹೇಳಿಕೊಂಡಿದ್ದಾನೆ. ದೂರುದಾರರ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಸಾರ್ವಜನಿಕರನ್ನು ನಿಂದಿಸಲು ಬಳಸಲಾಗಿದೆ ಎಂದು ಹೇಳಿದ್ದಾನೆ.
ಈ ಸಂಬಂಧ ವಿಚಾರಣೆಗಾಗಿ ಮುಂಬೈಗೆ ಪ್ರಯಾಣಿಸುವಂತೆ ಸೂಚಿಸಿದ್ದಾನೆ. ಆಗ ಸಂತ್ರಸ್ತ ತಾನು ಪ್ರಯಾಣ ಬೆಳೆಸಲು ಸಾಧ್ಯವಿಲ್ಲ ಎಂದಾಗ, ವಿಡಿಯೋ ಕರೆ ಮೂಲಕ ಹಿರಿಯ ಅಧಿಕಾರಿ ಕವಿತಾ ಪೊಮನೆ ಎಂದು ಗುರುತಿಸಿಕೊಂಡ ಮಹಿಳೆ ಮತ್ತು ಉನ್ನತ ಅಧಿಕಾರಿ ಎಂದು ಹೇಳಿಕೊಂಡ ವಿಶ್ವಾಸ್ ಎಂಬ ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದಾರೆ.
ಕರೆ ಮಾಡಿದವರು ವಿಚಾರಣೆಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುವುದು ಎಂದು ಹೇಳಿ ಅವರ ವೈಯಕ್ತಿಕ, ಕುಟುಂಬ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾರೆ ಮತ್ತು ಯಾರಿಗಾದರೂ ಬಹಿರಂಗಪಡಿಸಿದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರತಿ ಮೂರು ಗಂಟೆಗಳಿಗೊಮ್ಮೆ ಅವರ ಲೈವ್ ಲೊಕೇಶನ್ ಅನ್ನು ಕಳಿಸುವಂತೆ ಕೇಳಿದ್ದಾರೆ. ಆರ್‌ಬಿಐ ಪರಿಶೀಲನೆಗಾಗಿ ಅವರ ಬ್ಯಾಂಕ್ ವಿವರಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಸೂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

