Friday, November 21, 2025

ದುಬೈ ಏರೋ ಶೋನಲ್ಲಿ ಭಾರತದ ‘ತೇಜಸ್ ವಿಮಾನ’ ಪತನ: ಪೈಲಟ್ ಸಾವು, ತನಿಖೆಗೆ IAF ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್;

ದುಬೈ ಏರೋ ಶೋ ವೇಳೆ ಭಾರತದ ತೇಜಸ್ ಯುದ್ಧ ವಿಮಾನ ಪತನಗೊಂಡಿದೆ. ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನ ನೋಡ ನೋಡುತ್ತಿದ್ದಂತೆಯೇ ಬೆಂಕಿಯುಂಡೆಯಾಗಿ ನೆಲಕ್ಕೆ ಅಪ್ಪಳಿಸಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ ಏಕ ಆಸನದ ಹಗುರ ಯುದ್ಧ ವಿಮಾನ (LCA) ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಪತನವಾಗಿದೆ.

ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿರುವುದನ್ನು ಭಾರತೀಯ ವಾಯುಪಡೆ ದೃಢಪಡಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಈ ದು:ಖದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದೆ.

ಅಪಘಾತಕ್ಕೆ ಏನು ಕಾರಣ ಎಂಬುದನ್ನು ತಿಳಿಯಲು ವಿಚಾರಣಾ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಭಾರತೀಯ ವಾಯುಪಡೆ ಹೇಳಿದೆ.

ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದ್ವೈವಾರ್ಷಿಕ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆ. ಎಮಿರೇಟ್ಸ್ ಮತ್ತು ಪ್ಲೈ ದುಬೈನಿಂದ ಬಹು ಬಿಲಿಯನ್ ಡಾಲರ್ ಮೊತ್ತದ ವಿಮಾನ ಖರೀದಿ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಏರ್ ಶೋ ವೇಳೆಯಲ್ಲಿ ಘೋಷಿಸಲಾಗಿದೆ. ಇದು ಎರಡನೇ ತೇಜಸ್ ವಿಮಾನದ ಅಪಘಾತವಾಗಿದೆ. ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧವಿಮಾನವು ಪತನಗೊಂಡಿತ್ತು.ಆದರೆ ಪೈಲಟ್ ಸುರಕ್ಷಿತವಾಗಿ ಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

v

error: Content is protected !!