ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ–ಮಹಾರಾಷ್ಟ್ರದಲ್ಲಿ ನಡೆದ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲೇ ಮಹಿಳೆಯೊಬ್ಬರು ಪವರ್ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಪ್ಲಗ್ ಮಾಡಿ ಮ್ಯಾಗಿ ಬೇಯಿಸಿರುವುದು, ಬಳಿಕ ಅದೇ ಕೆಟಲ್‌ನಲ್ಲಿ ಚಹಾ ತಯಾರಿಸಲು ಮುಂದಾಗಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಚಾರ್ಜಿಂಗ್‌ಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿರುವ ಸಾಕೆಟ್‌ಗಳನ್ನು ಹೆಚ್ಚಿನ ವ್ಯಾಟ್ ಸಾಧನಗಳಿಗೆ ಬಳಸಿರುವುದು ರೈಲು ಪ್ರಯಾಣಿಕರ ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವೈರಲ್ ವೀಡಿಯೊದಲ್ಲಿ ಆ ಮಹಿಳೆ “ಪ್ರವಾಸದಲ್ಲಿದ್ದರೂ ಅಡುಗೆ ಮನೆಯಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ” ಎಂದು ನಕ್ಕು ಮಾತನಾಡುತ್ತಿರುವುದು ಕಂಡುಬರುತ್ತದೆ. ಮ್ಯಾಗಿ ತಯಾರಿಸಿದ ನಂತರ 15 ಜನರಿಗೆ ಚಹಾ ಮಾಡಬೇಕೆಂದು ಹೇಳಿರುವುದು ಮತ್ತಷ್ಟು ಆಶ್ಚರ್ಯ ಮೂಡಿಸಿದೆ. ಆದರೆ ಈ ಅನಧಿಕೃತ ಕ್ರಿಯೆಯ ಹಿಂದೆ ಇದ್ದ ಅಪಾಯವನ್ನು ನಿರ್ಲಕ್ಷಿಸುವಂತಹದ್ದಲ್ಲ. ಹೆಚ್ಚಿನ ಪವರ್ ಉಪಕರಣಗಳಿಂದ ರೈಲಿನ ಒಳಾಂಗಣದಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿ ಅಪಾಯ ಉಂಟಾಗಬಹುದು.
ಈ ಘಟನೆಗೆ ಪ್ರತಿಕ್ರಿಯಿಸಿದ ಸೆಂಟ್ರಲ್ ರೈಲ್ವೆ, ರೈಲಿನೊಳಗೆ ಎಲೆಕ್ಟ್ರಿಕ್ ಕೆಟಲ್ ಬಳಸುವುದು ಸಂಪೂರ್ಣ ನಿಷೇಧಿತ, ಅಸುರಕ್ಷಿತ ಹಾಗೂ ಕಾನೂನುಬಾಹಿರವೆಂದು ಸ್ಪಷ್ಟಪಡಿಸಿದೆ. ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಮತ್ತು ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿರುವ ರೈಲ್ವೆ ಇಲಾಖೆ, ಪ್ರಯಾಣಿಕರ ಸುರಕ್ಷತೆಗಾಗಿ ಇಂತಹ ನಡವಳಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕೆಂದು ಹೇಳಿದೆ.

