ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಾಂಕೋವರ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
70 ವರ್ಷದ ದಲ್ಬೀರ್ ಸಿಂಗ್ ಮೃತ ಪ್ರಯಾಣಿಕ. ಕೋಲ್ಕತ್ತಾ ಮೂಲಕ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆ ದಲ್ಬೀರ್ ಸಿಂಗ್ ಅವರನ್ನು ರಾತ್ರಿ 9. 15 ರ ಸುಮಾರಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ನಂತರ ವಿಮಾನವು ರಾತ್ರಿ 10.10 ಕ್ಕೆ ಉಳಿದ 176 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿತು. ವಿಮಾನ ಇಳಿದ ನಂತರ, ದಲ್ಬೀರ್ ಸಿಂಗ್ ಅವರನ್ನು ತಕ್ಷಣವೇ ಚಾರ್ನಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಸಿಬ್ಬಂದಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅವರು ಪ್ರಸ್ತುತ ಕೋಲ್ಕತ್ತಾಗೆ ತೆರಳಿದ್ದಾರೆ. ಮೃತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಹೃದಯಾಘಾತದಿಂದ ಪ್ರಯಾಣಿಕ ಸಾವು

