Tuesday, November 25, 2025

ಬೂತ್‌ ಮಟ್ಟದ ಅಧಿಕಾರಿ ನೇಣಿಗೆ ಶರಣು: ಡೆತ್‌ನೋಟ್‍ನಲ್ಲಿ ಚುನಾವಣಾ ಆಯೋಗದ ವಿರುದ್ಧ ಆರೋಪ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈ ನಡುವೆ ಬೂತ್‌ ಮಟ್ಟದ ಅಧಿಕಾರಿಯೊಬ್ಬರು (BLO) ಕೆಲಸದ ಒತ್ತಡದಿಂದ ನೇಣಿಗೆ ಶರಣಾಗಿದ್ದಾರೆ.

ನೇಣಿಗೆ ಶರಣಾದ ಮಹಿಳೆಯನ್ನು ಪಶ್ಚಿಮ ಬಂಗಾಳದ ನಾಡಿಯಾ ನಿವಾಸಿ ರಿಂಕು ತರಫ್ದಾರ್ (54) ಎಂದು ಗುರುತಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಅವರು ತೀವ್ರ ಒತ್ತಡಕ್ಕೊಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅವರು ಬಂಗಾಳಿ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ಮಹಿಸುತ್ತಿದ್ದರು. ಅವರು ಆತ್ಮಹತ್ಯೆಗೆ ಶರಣಾದ ರೂಮ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ʻನನಗೆ ಬಿಎಲ್‌ಒ ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ, ಆಡಳಿತಾತ್ಮಕ ಒತ್ತಡ ಬರುತ್ತದೆ. ಅದನ್ನು ನನಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ತರಫ್ದಾರ್ ಅವರ ಸೋದರ ಮಾವ ಮಾಧ್ಯಮಗಳ ಜೊತೆ ಮಾತನಾಡಿ, ಅವರಿಗೆ ಬಿಎಲ್‌ಒ ಕೆಲಸ ವಹಿಸಿದಾಗಿಂದ ಮಾನಸಿಕ ಒತ್ತಡದಲ್ಲಿದ್ದರು. ಒತ್ತಡದ ಬಗ್ಗೆ ಯಾರೊಂದಿಗೂ ಹಂಚಿಕೊಂಡಿಲ್ಲ. ತಮ್ಮ ಕೆಲಸವನ್ನು ಬಿಡಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬಂಗಾಳದಲ್ಲಿ ನಡೆಯುತ್ತಿರುವ SIR ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಸಿಇಸಿಗೆ ಅವರು ಪತ್ರ ಬರೆದಿದ್ದು, ಪತ್ರದಲ್ಲಿ ಯೋಜಿತವಲ್ಲದ, ಒತ್ತಾಯಪೂರ್ವಕ ಕೆಲಸ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆ ಕೈ ಬಿಡುವಂತೆ ಸಲಹೆ ನೀಡಿದ್ದಾರೆ.

error: Content is protected !!