Tuesday, November 25, 2025

ದೆಹಲಿಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಬ್ಯಾಗ್ ನಲ್ಲಿತ್ತು ಸಾವಿನ ಕುರಿತು ಮಾಹಿತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ದೆಹಲಿಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನವೆಂಬರ್ 18ರಂದು ಸೇಂಟ್ ಕೊಲಂಬಸ್‌ ಶಾಲೆಯ ವಿದ್ಯಾರ್ಥಿ ಶೌರ್ಯ ಪಾಟೀಲ್ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಆತನ ಐವರು ಸಹಪಾಠಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲವು ಶಿಕ್ಷಕರು ವಿದ್ಯಾರ್ಥಿಗೆ ಅವಮಾನ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಕೊಲಂಬಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ನವೆಂಬರ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆತನ ತಂದೆ ಪ್ರದೀಪ್ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರ ಪ್ರಕಾರ ಶಿಕ್ಷಕರು ತನ್ನ ಮಗನಿಗೆ ಬೆದರಿಕೆ ಹಾಕಿದ್ದಾರೆ. ಪೋಷಕರಿಗೆ ಕರೆ ಮಾಡಿ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಹೇಳಿದ್ದಾರೆ ಎಂದು ಸಹಪಾಠಿಗಳು ಹೇಳಿದ್ದರು. ಶಿಕ್ಷಕರಲ್ಲಿ ಒಬ್ಬರು ಹುಡುಗನನ್ನು ತಳ್ಳಿದ್ದಾರೆ ಎಂದು ಕೂಡ ಎಫ್‌ಐಆರ್ ನಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಯ ಶಾಲೆಯ ಬ್ಯಾಗ್ ನಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಇದರಲ್ಲಿ ವಿದ್ಯಾರ್ಥಿಯು ನಾಲ್ವರು ಶಿಕ್ಷಕರು ತನಗೆ ಬೆದರಿಕೆ ಹಾಕಿದ್ದಾರೆ ಮತ್ತು ಸಾರ್ವಜನಿಕವಾಗಿ ನನ್ನನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ಹೇಳಿಕೊಂಡಿದ್ದಾನೆ. ಶಾಲೆಗೆ ಭೇಟಿ ನೀಡಿರುವ ಪೊಲೀಸ್ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಶಿಕ್ಷಕರ ವಿವರಗಳನ್ನು ಸಂಗ್ರಹಿಸಿದ್ದು, ಕೂಡಲೇ ಅವರಿಗೆ ಸಮನ್ಸ್ ಜಾರಿ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಾಲೆಯು ಈಗಾಗಲೇ ನಾಲ್ವರು ಶಿಕ್ಷಕರನ್ನು ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿರುವುದಾಗಿ ತಿಳಿಸಿದೆ. ಪೊಲೀಸ್ ವಿಚಾರಣೆಯ ವೇಳೆ ಐವರು ವಿದ್ಯಾರ್ಥಿಗಳು ಒಂದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಹೇಳಿಕೆಗಳಿಗೂ ಸಿಸಿಟಿವಿ ದೃಶ್ಯಗಳಿಗೂ ಹೋಲಿಕೆ ಇದೆ. ಒಬ್ಬ ಶಿಕ್ಷಕ ಇತರ ಮಕ್ಕಳ ಮುಂದೆ ಶೌರ್ಯನನ್ನು ಅವಮಾನಿಸಿರುವುದನ್ನು ಕಾಣಬಹುದು. ವಿದ್ಯಾರ್ಥಿಯ ಕುಟುಂಬವನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಶಾಲೆಯ ಶಿಕ್ಷಕರ ಮೇಲೆ ಬಿಎನ್ ಎಸ್ ಸೆಕ್ಷನ್ 107 ಆತ್ಮಹತ್ಯೆಗೆ ಪ್ರಚೋದನೆ ಮತ್ತು 3(5) ಸಾಮಾನ್ಯ ಉದ್ದೇಶದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯ ದೆಹಲಿಯ ಉಪ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಪತ್ರ ಬರೆದು 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

error: Content is protected !!