Tuesday, November 25, 2025

ಮಸೀದಿ ಉತ್ಖನನದ ವೇಳೆ ಸಿಕ್ಕಿತು ರಾಮ–ಸೀತಾ ವಿಗ್ರಹ: ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಪಾಪೆಟ್ ಗ್ರಾಮದಲ್ಲಿ ಮಸೀದಿಯೊಂದರ ಉತ್ಖನನ ಕೆಲಸ ನಡೆಯುತ್ತಿದ್ದ ವೇಳೆ ರಾಮ ಮತ್ತು ಸೀತೆಯ ವಿಗ್ರಹಗಳು ಪತ್ತೆಯಾಗಿವೆ. ವಿಗ್ರಹಗಳ ಪತ್ತೆ ಸ್ಥಳೀಯರಲ್ಲಿ ಸಂಚಲನ ಮೂಡಿಸಿದ್ದು, ಹಿಂದು ಸಮುದಾಯದ ಅನೇಕರು ಸ್ಥಳಕ್ಕೆ ಧಾವಿಸಿ, ವಿಗ್ರಹಗಳ ಬಳಿ ತಾತ್ಕಾಲಿಕ ವೇದಿಕೆ ಕಟ್ಟಿಸಿ ಪೂಜೆ ಸಲ್ಲಿಸಿದರು. ಈ ಪ್ರದೇಶದಲ್ಲಿ ಹಿಂದೆ ದೇವಾಲಯವಿತ್ತು ಎಂಬ ನಂಬಿಕೆ ಇದರಿಂದ ಮತ್ತಷ್ಟು ಬಲಗೊಂಡಿದೆ ಎಂದು ಸ್ಥಳೀಯ ಹಿಂದು ಮುಖಂಡರು ಹೇಳಿದ್ದಾರೆ. ಈ ಸುದ್ದಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಇದಕ್ಕೆ ವಿರುದ್ಧವಾಗಿ, ಅಲ್ಲಿ ಇರುವ ಮಸೀದಿ ಸಮುದಾಯದ ನಾಯಕರು ಈ ವೇದಿಕೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದು, ಮೂರ್ತಿಗಳ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಸಮುದಾಯಗಳ ಆಗಮನದಿಂದ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಯಾವುದೇ ಅಹಿತಕರ ಬೆಳವಣಿಗೆ ಸಂಭವಿಸದಂತೆ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿಯೂ ಭಾರೀ ಚರ್ಚೆಯಾಗಿರುವುದರಿಂದ, ಸ್ಥಳೀಯ ಆಡಳಿತ ಎರಡು ಸಮುದಾಯಗಳ ನಡುವೆ ಶಾಂತಿ ಕಾಪಾಡುವ ಪ್ರಯತ್ನ ನಡೆಸುತ್ತಿದೆ. ವಿಗ್ರಹಗಳ ಮೂಲದ ಬಗ್ಗೆ ಅಧಿಕೃತ ಪರಿಶೀಲನೆ ಆರಂಭಿಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳದಂತೆ ಅಧಿಕಾರಿಗಳು ಜಾಗ್ರತೆಯಿಂದ ಕ್ರಮ ಕೈಗೊಂಡಿದ್ದಾರೆ.

error: Content is protected !!