Tuesday, November 25, 2025

ಬೆಂಗಳೂರಲ್ಲಿ 7.11 ಕೋಟಿ ದರೋಡೆ ಮಾಡಿದ್ಯಾಕೆ? ಸಾಲದ ಸುಳಿಯಲ್ಲಿ ಬಿದ್ದ ಗ್ಯಾಂಗ್‌ನ ಅಸಲಿ ಕಥೆ ಬಹಿರಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಬಿಐ ಅಧಿಕಾರಿಗಳಂತೆ ವೇಷಧರಿಸಿ ಎಟಿಎಂಗೆ ಹಣ ತುಂಬಲು ತೆರಳುತ್ತಿದ್ದ ಸಿಎಂಎಸ್ ಕ್ಯಾಶ್ ವ್ಯಾನ್‌ನ್ನು ಹಾಡಹಗಲೇ ತಡೆದು 7.11 ಕೋಟಿ ರೂ. ದೋಚಿದ ದರೋಡೆಕೋರರ ನಿಜವಾದ ಕಥೆ ಇದೀಗ ಬೆಳಕಿಗೆ ಬಂದಿದೆ. ರಾಜಧಾನಿಯನ್ನು ನಡುಗಿಸಿದ್ದ ಈ ದರೋಡೆ ಪ್ರಕರಣವನ್ನು ಬೇಧಿಸಿ ಪೊಲೀಸರು ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ 6.29 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಲ್ಲಿ ಸಿಎಂಎಸ್ ಸಂಸ್ಥೆಯ ಮಾಜಿ ನೌಕರ ಜೇವಿಯರ್‌ವೇ ಈ ದರೋಡೆಯ ಮಾಸ್ಟರ್‌ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಜೊತೆಗಿದ್ದ ಹಾಲಿ ಸಿಎಂಎಸ್ ಸಿಬ್ಬಂದಿ ಗೋಪಿ, ರವಿ, ಜಿತೇಶ್, ಜೊತೆಗೆ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪನಾಯಕ ಸೇರಿ ಹಲವರು ಈ ದರೋಡೆಗೆ ಕೈ ಜೋಡಿಸಿದ್ದರು. ಸಂಸ್ಥೆಯ ಕಾರ್ಯಪದ್ಧತಿಯನ್ನು ಒಳಗೆ ತಿಳಿದಿದ್ದ ಜೇವಿಯರ್‌ನ ಯೋಜನೆ ಪ್ರಕಾರ ಗ್ಯಾಂಗ್ ಅದೇ ದಿನ, ಅದೇ ಸಮಯದಲ್ಲಿ ವ್ಯಾನ್‌ನ್ನು ತಡೆದು ಸಿಬ್ಬಂದಿಯನ್ನು ಬೆದರಿಸಿ ನಗದು ಎತ್ತಿಕೊಂಡಿತ್ತು.

ತನಿಖೆಯಲ್ಲಿ ಆರೋಪಿಗಳ ದರೋಡೆಗೆ ಕಾರಣವಾದ ನಿಜವಾದ ಕಾರಣಗಳು ಹೊರಬಿದ್ದಿವೆ. ಗ್ಯಾಂಗ್‌ನಲ್ಲಿದ್ದ ಹಲವರಿಗೆ ಇಸ್ಪೀಟು ಹಾಗೂ ಸಾಲಗಳು ತಲೆಮೇಲೆ ಏರಿದ್ದವು. ತಿಂಗಳಿಗೆ ಸಿಗುತ್ತಿದ್ದ 17 ಸಾವಿರ ಸಂಬಳದಲ್ಲಿ ಅವರು ಆ ಸಾಲವನ್ನು ಯಾವತ್ತಿಗೂ ತೀರಿಸಲಾಗುವುದಿಲ್ಲ ಎಂಬ ನಿರಾಶೆಯಿಂದ ದೊಡ್ಡ ದರೋಡೆ ಯೋಜನೆ ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಚಿದ ಹಣದಿಂದ ಸಾಲ ತೀರಿಸಿ, ಉಳಿದ ಹಣದಿಂದ ಸುಖ ಜೀವನ ನಡೆಸಬೇಕೆಂಬ ಉದ್ದೇಶವೇ ಈ ಅಪರಾಧಕ್ಕೆ ಪ್ರಮುಖ ಕಾರಣವೆಂದೂ ತನಿಖಾ ವರದಿ ಹೇಳಿದೆ.

error: Content is protected !!