Tuesday, November 25, 2025

ಕಬ್ಬಿಣದ ಸರಳು ಬಡಿದು ಡೀಸೆಲ್ ಸೋರಿಕೆ: 2 ಗಂಟೆ ಕೆಟ್ಟುನಿಂತ ಹಂಪಿ ಎಕ್ಸ್‌ಪ್ರೆಸ್‌ ರೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಮೀಪ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಅಚಾನಕ್ ನಿಂತಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿತು.

ವಂದಾರಗುಪ್ಪೆ ಬಳಿಯಲ್ಲಿ ಟ್ರ್ಯಾಕ್ ಮೇಲೆ ಇದ್ದ ಕಬ್ಬಿಣದ ಸರಳು ಡೀಸೆಲ್ ಟ್ಯಾಂಕ್‌ಗೆ ಬಡಿದು ಸೋರಿಕೆ ಉಂಟಾದದ್ದು ಪತ್ತೆಯಾಗಿದೆ. ಸಿಬ್ಬಂದಿ ಪರಿಶೀಲಿಸಿದಾಗ ಟ್ಯಾಂಕ್‌ನ ಕೆಳಭಾಗದಿಂದ ಡೀಸೆಲ್ ಹರಿಯುತ್ತಿರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ತಲುಪಿದ ರೈಲ್ವೆ ತಾಂತ್ರಿಕ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದು, ನಂತರ ಮತ್ತೊಂದು ಎಂಜಿನ್ ಸಹಾಯದಿಂದ ರೈಲನ್ನು ಬೆಂಗಳೂರು ಕಡೆಗೆ ಕಳುಹಿಸಲಾಯಿತು.

ಈ ಘಟನೆ ಉದ್ದೇಶಪೂರ್ವಕವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಟ್ರ್ಯಾಕ್ ಮೇಲೆ ಕಬ್ಬಿಣದ ಸರಳು ಇಟ್ಟಿರುವ ಕುರಿತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡೀಸೆಲ್ ಸೋರಿಕೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ರೈಲು ನಿಂತಿದ್ದರೂ, ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿ ಪ್ರಯಾಣ ಮುಂದುವರಿಸಲಾಗಿದೆ.

error: Content is protected !!