ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬನ್ ಪಾರ್ಕ್ 2025ರ ಪುಷ್ಪೋತ್ಸವಕ್ಕೆ ಸಜ್ಜಾಗಿದ್ದು, ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಒಟ್ಟಿಗೆ ಸಂಭ್ರಮಿಸುವ ವಿಶಿಷ್ಟ ಫ್ಲವರ್ ಶೋ ಈ ಬಾರಿ ದಶಕದ ಬಳಿಕ ಮೊದಲ ಬಾರಿಗೆ ಇಲ್ಲಿ ಆಯೋಜನೆಯಾಗುತ್ತಿದೆ. ಲಾಲ್ಬಾಗ್ನಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಸಂಪ್ರದಾಯಬದ್ಧ ಶೋಗೆ ಪೂರಕವಾಗಿ, ನಗರ ಮಧ್ಯದ ಕಬ್ಬನ್ ಪಾರ್ಕ್ನಲ್ಲಿ ಪುಷ್ಪ ಕಲರವಕ್ಕೆ ತೋಟಗಾರಿಕೆ ಇಲಾಖೆ ಭರ್ಜರಿ ಸಿದ್ಧತೆ ಕೈಗೊಂಡಿದೆ.
ಈ ಬಾರಿ ಹೂವಿನ ಕಲಾಕೃತಿಗಳು, ವಿಶೇಷ ಅಲಂಕಾರಗಳು ಮತ್ತು ಸಾವಿರಾರು ಮಕ್ಕಳನ್ನು ಆಕರ್ಷಿಸುವ ವಿನ್ಯಾಸಗಳು ಮುಖ್ಯ ಆಕರ್ಷಣೆಯಾಗಿವೆ. ಬ್ಯಾಂಡ್ ಸ್ಟ್ಯಾಂಡ್ ಮತ್ತು ಮಹಾರಾಜ ಪ್ರತಿಮೆ ಸುತ್ತಮುತ್ತ 20ರಿಂದ 25 ಸಾವಿರ ಹೂ ಕುಂಡಗಳನ್ನು ಪ್ರದರ್ಶನಕ್ಕಿರಿಸಲಾಗುತ್ತಿದೆ. ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ 11 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳ ಜೊತೆಗೆ ದೇಶ–ವಿದೇಶಗಳ ಹೂವಿನ ಅಲಂಕಾರಗಳು ಇರಲಿವೆ.
ಭಾಗವಹಿಸುವವರ ಮನರಂಜನೆಗಾಗಿ ಶಾಸ್ತ್ರೀಯ ನೃತ್ಯ, ಸಂಗೀತ ಸಂಜೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಲಾಲ್ಬಾಗ್ಗಿಂತ ಕಬ್ಬನ್ ಪಾರ್ಕ್ ಹೆಚ್ಚು ವಿಶಾಲವಾಗಿರುವುದರಿಂದ ಇಲ್ಲಿ ಶೋ ನಡೆಸುವ ನಿರ್ಧಾರ ಸಾರ್ವಜನಿಕರಲ್ಲಿ ಮೆಚ್ಚುಗೆ ಪಡೆದಿದೆ.
ಪ್ರವೇಶ ಶುಲ್ಕದ ವಿಷಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಸರ್ಕಾರಿ ಶಾಲಾ ಮಕ್ಕಳು ಉಚಿತವಾಗಿ ಪ್ರವೇಶಿಸಬಹುದು. ಖಾಸಗಿ ಶಾಲಾ ಮಕ್ಕಳಿಗೆ 10 ರೂ, ಸಾರ್ವಜನಿಕರಿಗೆ 30 ರೂ ನಿಗದಿಪಡಿಸಲಾಗಿದೆ.

