ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗುತ್ತಿರುವ ನಡುವೆಯೇ ಗೃಹಸಚಿವ ಜಿ. ಪರಮೇಶ್ವರ್ ತಮ್ಮ ಭವಿಷ್ಯ ರಾಜಕೀಯ ಆಸೆಯನ್ನು ಸ್ಪಷ್ಟಪಡಿಸುತ್ತಾ, “ನಾನು ಯಾವಾಗಲೂ ಸಿಎಂ ರೇಸ್‌ನಲ್ಲಿ ಇರುತ್ತೀನಿ” ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ವಿಷಯವನ್ನು ನೆನಪಿಸಿಕೊಂಡ ಅವರು, “ನಾನೊಬ್ಬನೇ ಸರ್ಕಾರ ತಂದೆ ಎಂದು ನಾನು ಎಂದಿಗೂ ಹೇಳಿಕೊಂಡಿಲ್ಲ” ಎಂದು ಹೇಳಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ಪರೋಕ್ಷ ಟಾಂಗ್ ನೀಡಿದರು.
ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2013ರಲ್ಲೂ ತಾವು ಸಿಎಂ ರೇಸ್‌ನಲ್ಲಿದ್ದೆವು ಎಂಬುದನ್ನು ಸ್ಮರಿಸಿ, “ಅವಕಾಶ ಸಿಕ್ಕಿದ್ದರೆ ಆಗ ಪರಿಸ್ಥಿತಿ ಬೇರೆ ಆಗಿರುತ್ತಿತ್ತು. ಆದರೆ ನಾನು ಗೆದ್ದಿರಲಿಲ್ಲ, ಈಗ ಆ ಕನಸು ನನಸಾಗುತ್ತದೆಯೋ ಗೊತ್ತಿಲ್ಲ, ನನಗೆ ಕನಸೇ ಬರುವುದಿಲ್ಲ” ಎಂದು ನಕ್ಕರು.
ನಾಯಕತ್ವ ಬದಲಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಹೈಕಮಾಂಡ್ ಇದುವರೆಗೆ ಒಂದೇ ಮಾತನ್ನೂ ಹೇಳಿಲ್ಲ. ಸಿಎಂ ಅವರೇ 5 ವರ್ಷ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಬದಲಾವಣೆ ಮಾಡುವ ಅಧಿಕಾರ ಹೈಕಮಾಂಡ್‌ಗೇ ಇದೆ; ನನಿಗಂತೂ ಈಗ ಬದಲಾವಣೆ ನಡೆಯಬೇಕೆಂಬ ಭಾವನೆ ಇಲ್ಲ” ಎಂದರು.

