ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನ 46 ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಶನಿವಾರ ಮದೀನಾದ ಮಸ್ಜಿದ್-ಎ-ನಬವಿಯಲ್ಲಿ ವಿಶೇಷ ಜನಾಜಾ ಪ್ರಾರ್ಥನೆ ನೆರವೇರಿಸಿ ಅವರ ಅಂತ್ಯಕ್ರಿಯೆಯನ್ನು ಜನ್ನತ್-ಉಲ್-ಬಾಕಿ ಸ್ಮಶಾನದಲ್ಲಿ ಗೌರವಪೂರ್ವಕವಾಗಿ ನಡೆಸಲಾಯಿತು.
ಪ್ರವಾದಿ ಮುಹಮ್ಮದ್ ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಸಮಾಧಿಯಾದ ಈ ಪವಿತ್ರ ಸ್ಥಳದಲ್ಲಿ ಸಾವನ್ನಪ್ಪಿದವರ ಸಮಾಧಿ ಮಾಡಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ವಿನಂತಿಯನ್ನು ಸೌದಿ ಸರ್ಕಾರ ಒಪ್ಪಿಕೊಂಡಿರುವುದನ್ನು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಅಜರುದ್ದೀನ್ ತಿಳಿಸಿದ್ದಾರೆ.
ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಾ, ಜುಹ್ರ್ ನಮಾಜ್ ನಂತರ ಮಸ್ಜಿದ್-ಎ-ನಬವಿಯಲ್ಲಿ ಜನಾಜಾ ಪ್ರಾರ್ಥನೆ ನಡೆದಿದ್ದು, ನಂತರ ಜನ್ನತ್-ಉಲ್-ಬಾಕಿಯಲ್ಲಿ ಎಲ್ಲರನ್ನೂ ಸಮಾಧಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 17 ರಂದು ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 18 ಮಂದಿಯನ್ನು ಒಳಗೊಂಡಂತೆ ಒಟ್ಟು 46 ಯಾತ್ರಿಕರು ಸಾವನ್ನಪ್ಪಿದ್ದರು. ಜೆಡ್ಡಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ವಾಹನ ಸಂಪೂರ್ಣ ಸುಟ್ಟುಹೋಗಿತ್ತು.

