ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ರಾಜಕೀಯ ಮತ್ತು ಅಭಿವೃದ್ಧಿ ಚಟುವಟಿಕೆಗಳು ಗರಿಗೆದರುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಶಿಡ್ಲಘಟ್ಟಕ್ಕೆ ಆಗಮಿಸಲು ಸಿದ್ಧರಾಗಿದ್ದು, ಜೆಡಿಎಸ್ ಶಾಸಕ ರವಿಕುಮಾರ್ ಕ್ಷೇತ್ರದಲ್ಲೇ ಕಾಂಗ್ರೆಸ್ ಸರ್ಕಾರ ಭರ್ಜರಿ ಅಭಿವೃದ್ಧಿ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಸುಮಾರು 2,000 ಕೋಟಿ ರೂಪಾಯಿಗಳ ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಸೇರಿದಂತೆ ಪ್ರಾಮುಖ್ಯ ಯೋಜನೆಗಳ ಕಾರ್ಯಕ್ರಮ ಇಂದು ನಡೆಯಲಿದೆ.
200 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಜೊತೆಗೆ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಬಹು ನಿರೀಕ್ಷಿತ ಯೋಜನೆ, ಹೆಚ್‌ಎನ್ ವ್ಯಾಲಿ 3ನೇ ಹಂತದಲ್ಲಿ 164 ಕೆರೆಗಳಿಗೆ ನೀರು ಹರಿಸುವ ಪ್ರಸ್ತಾವನೆಗಳು ಈ ಭೇಟಿ ಕೇಂದ್ರಬಿಂದುಗಳಾಗಿವೆ.
ಇದರ ನಡುವೆ ಸಿಎಂ–ಡಿಸಿಎಂ ರಾಜಕೀಯ ಚಲನವಲನಗಳ ಮೇಲೆ ಸರ್ವರ ದೃಷ್ಟಿ ನೆಟ್ಟಿದೆ. ಇತ್ತೀಚಿನ ಕುರ್ಚಿ ಕದನ ಚರ್ಚೆಗಳ ನಡುವೆ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಹಾಜರಾಗುತ್ತಿರುವುದು ಹೆಚ್ಚಿನ ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ರೈತ ಪರ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಮುಂದಿಡಲು ಹೋರಾಟಕ್ಕಿಳಿದಿದ್ದು, ಪೊಲೀಸ್ ಇಲಾಖೆ ಪ್ರದೇಶದಲ್ಲಿ ಕಠಿಣ ಭದ್ರತೆ ಜಾರಿಗೊಳಿಸಿದೆ.

