ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಭಾರತಕ್ಕೆ ವಾಪಾಸಾಗಿದ್ದಾರೆ. ಇತ್ತ ಜಿ20 ಶೃಂಗಸಭೆ ಆಯೋಜಿಸುವ ಕಾರ್ಯದಲ್ಲಿ ಭಾರತ ನೀಡಿರುವ ಬೆಂಬಲಕ್ಕೆ ಸೌತ್ ಆಫ್ರಿಕಾ ಧನ್ಯವಾದ ಹೇಳಿದೆ.
ಈ ಬಾರಿಯ ಜಿ20 ನಾಯಕರ ಶೃಂಗಸಭೆಯನ್ನು ದಕ್ಷಿಣ ಆಫ್ರಿಕಾ ಆಯೋಜಿಸಿದೆ. ಆಫ್ರಿಕಾ ಖಂಡದಲ್ಲಿ ನಡೆಯುತ್ತಿರುವ ಮೊದಲ ಜಿ20 ಸಭೆಯೂ ಇದಾಗಿದೆ. ಈ ವೇಳೆ, ಜಿ20 ಸಭೆ ಆಯೋಜಿಸುವುದು ಇಷ್ಟು ಕಷ್ಟ ಎಂದು ತನಗೆ ಗೊತ್ತಿರಲಿಲ್ಲ ಎಂದು ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ವೇಳೆ ದಕ್ಷಿಣ ಆಫ್ರಿಕಾ ಅಧ್ಯಕ್ಷರು, ಜಿ20 ಆಯೋಜನೆ ವಿಚಾರದಲ್ಲಿ ಹಾಸ್ಯ ಮಾಡಿದ್ದಾರೆ. ‘ಜಿ20 ಸಮಿಟ್ ಆಯೋಜಿಸಲು ಸೌತ್ ಆಫ್ರಿಕಾಗೆ ಭಾರತ ಸಹಾಯ ಮಾಡಿದೆ. ಇದಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಆದರೆ, ಇದನ್ನು ಆಯೋಜಿಸುವುದು ಇಷ್ಟು ಕಷ್ಟದ ಕೆಲಸ ಎಂದು ನೀವು ಮೊದಲೇ ಹೇಳಿದ್ದರೆ, ನಾವು ಓಡಿ ಹೋಗುತ್ತಿದ್ದೆವು’ ಎಂದು ಸಿರಿಲ್ ರಮಫೋಸ ಅವರು ನರೇಂದ್ರ ಮೋದಿಗೆ ತಮಾಷೆ ಮಾಡಿದ್ದಾರೆ.
ಸೌತ್ ಆಫ್ರಿಕಾ ಅಧ್ಯಕ್ಷರ ಈ ಮಾತಿಗೆ ಸಭೆಯಲ್ಲಿದ್ದವರ ಮೊಗದಲ್ಲಿ ನಗೆಯುಕ್ಕಿಸಿತು. ಜಿ20 ಸಭೆ ಆಯೋಜಿಸುವ ವಿಚಾರದಲ್ಲಿ ಭಾರತದಿಂದ ಸೌತ್ ಆಫ್ರಿಕಾ ಸಾಕಷ್ಟು ಕಲಿತಿದೆ ಎಂದೂ ರಮಫೋಸಾ ಹೇಳಿದ್ದಾರೆ.
‘ನೀವು ಜಿ20 ಆಯೋಜಿಸಿದ್ದು ನೋಡಿ ಸಾಕಷ್ಟು ಕಲಿತಿದ್ದೇವೆ. ನೀವು ಸಭೆ ಆಯೋಜಿಸಿದ ಕಟ್ಟಡ ಬಹಳ ಭವ್ಯವಾಗಿತ್ತು. ನಮ್ಮದು ಬಹಳ ಚಿಕ್ಕದಾಯಿತು’ ಎಂದು ಸಿರಿಲ್ ರಮಫೋಸ ಹೇಳಿದಾಗ ಕೂಡಲೇ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ‘ಚಿಕ್ಕದು ಯಾವತ್ತೂ ಸುಂದರವೇ’ ಎಂದು ಸಮಾಧಾನ ಮಾಡಿದ್ದಾರೆ.

