ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ ಜಿಲ್ಲೆಯಲ್ಲಿ ಪ್ರವಾಸಿಗರ ಖಾಸಗಿ ಬಸ್ 70 ಅಡಿ ಆಳದ ಕಮರಿಗೆ ಬಿದ್ದು ನಾಲ್ವರು ಮಹಿಳೆಯರು ಸೇರಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ ಮತ್ತು ದೆಹಲಿಯ ಯಾತ್ರಿಕರು ಋಷಿಕೇಶ ಬಳಿಯ ಕುಂಜಾಪುರಿಗೆ ಭೇಟಿ ನೀಡಿದ್ದರು. ಈ ವೇಳೆ, ಬ್ರೇಕ್ ವಿಫಲವಾಗಿ ಬಸ್ ಕಮರಿಗೆ ಬಿದ್ದಿದೆ. ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದಲ್ಲಿ 5 ಯಾತ್ರಿಕರು ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಗುಜರಾತ್ ಮತ್ತು ದೆಹಲಿಯವರಾಗಿದ್ದಾರೆ. ಅವರು ಕುಂಜಾಪುರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಹಿಂತಿರುಗುವಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಋಷಿಕೇಶದಿಂದ ಕುಂಜಾಪುರಿಗೆ ಸುಮಾರು 23 ಕಿ.ಮೀ ದೂರವಿದೆ.
ಬಸ್‌ನಲ್ಲಿ 25 ಜನರಿದ್ದರು. ಹಿಂದೋಲಖಲ್ ಬಳಿ ಬಸ್ ಸುಮಾರು 70 ಮೀಟರ್ ಆಳದ ಕಂದಕಕ್ಕೆ ಬಿದ್ದಿತು. ಎಸ್‌ಡಿಆರ್‌ಎಫ್ ಕಮಾಂಡರ್ ಅರ್ಪಣ್ ಯದುವಂಶಿ ನಿರ್ದೇಶನದಂತೆ, ಪೋಸ್ಟ್ ಧಲ್ವಾಲಾ, ಪೋಸ್ಟ್ ಕೋಟಿ ಕಾಲೋನಿ ಮತ್ತು ಎಸ್‌ಡಿಆರ್‌ಎಫ್ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ಐದು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು ಎಂದು ಎಎಸ್ಪಿ ಜೆ.ಆರ್. ಜೋಶಿ ತಿಳಿಸಿದರು.
ಬಸ್ ಬ್ರೇಕ್ ವಿಫಲವಾಗಿತ್ತು. ಇದರಿಂದಾಗಿ ಅದು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರಿಂದ ಮೂವರ ಸ್ಥಿತಿ ಗಂಭೀರವಾಗಿದೆ. ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಸಿಎಂ ಧಾಮಿ ಆಘಾತ: ತೆಹ್ರಿಯಲ್ಲಿ ನಡೆದ ಬಸ್ ಅಪಘಾತದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅಗಲಿದ ಆತ್ಮಗಳಿಗೆ ಸಂತಾಪ ಮತ್ತು ದುಃಖಿತ ಕುಟುಂಬಗಳಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜಿಲ್ಲಾಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಗಾಯಾಳುಗಳನ್ನು ರಕ್ಷಿಸಿವೆ. ಗಂಭೀರವಾಗಿ ಗಾಯಗೊಂಡವರನ್ನು ಏಮ್ಸ್ಗೆ ಕಳುಹಿಸಲಾಗಿದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು.

