ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಏಳು ಮೇಳಗಳೊಂದಿಗೆ ತಿರುಗಾಟ ಆರಂಭಿಸಿರುವ ಕಟೀಲು ಮೇಳಗಳ ಬಯಲಾಟದ ಸಂದರ್ಭ ಪಟಾಕಿ ಬಿಡುವುದಕ್ಕೆ ನಿಯಮ ಮಾಡಲಾಗಿದೆ.
ಮೇಳದ ದೇವರ ಚೌಕಿ ಪೂಜೆ, ಆ ಬಳಿಕ ದೇವರು ರಂಗಸ್ಥಳಕ್ಕೆ ಬರುವ ತನಕ ಸುಡುಮದ್ದು ಬಿಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಮತ್ತೆ ಪಟಾಕಿ ಬಿಡುವಂತಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾರೆ ಸುಡುಮದ್ದುಗಳನ್ನು ಬಿಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕಲಾವಿದರಿಗೂ ಅವರ ಆರೋಗ್ಯಕ್ಕೂ ತೊಂದರೆಗಳಾಗುತ್ತಿವೆ. ಪ್ರೇಕ್ಷಕರಿಗೂ ತೊಂದರೆಯಾಗುತ್ತದೆ ಎಂಬ ದೃಷ್ಟಿಯಲ್ಲಿ ಪಟಾಕಿಗೆ ಕಡಿವಾಣ ಹಾಕಲಾಗಿದೆ.
ಸೇವೆಯಾಟ ಆಡಿಸುವವರಿಗೆ ಆ ದಿನ ಮಾತ್ರ ಪಟಾಕಿ ಬಿಟ್ಟು ತಮ್ಮ ಭಕ್ತಿ, ಗೌಜಿ ಪ್ರದರ್ಶಿಸುವ ಅವಕಾಶ ಇರಬಹುದು. ಆದರೆ ಕಲಾವಿದರು ಪಟಾಕಿಗಳ ಸದ್ದು, ಹೊಗೆಯನ್ನು ತಿರುಗಾಟದ ಉದ್ದಕ್ಕೂ ಆರು ತಿಂಗಳೂ ಅನುಭವಿಸಬೇಕಾದ ಸ್ಥಿತಿ. ಇದರಿಂದ ಅವರ ಧ್ವನಿ ಕೇಳಿಸುವುದಿಲ್ಲ. ಹೊಗೆಯಿಂದ ಆರೋಗ್ಯಕ್ಕೂ ಹಾಳು. ಯಕ್ಷಗಾನ ಕಲೆಯ ಚಂದಕ್ಕೂ ತೊಡಕು.
ಸಾಮಾನ್ಯವಾಗಿ ಕಟೀಲು ಮೇಳಗಳಲ್ಲಿ ದೇವೀಮಾಹಾತ್ಮ್ಯೆಯೇ ಹೆಚ್ಚು ಆಗುವುದು. ದೇವೀ ಪ್ರತ್ಯಕ್ಷವಾಗುವಾಗ, ಮಹಿಷಾಸುರ ಬರುವಾಗ, ವಧೆ ಆಗುವಾಗ, ವಿದ್ಯುನ್ಮಾಲಿ ಬರುವಾಗ, ಯಕ್ಷನ ಪ್ರವೇಶಕ್ಕೆ, ಶುಂಭ ನಿಶುಂಭರು ಬರುವಾಗ ಹೀಗೆ ಒಟ್ಟಾರೆ ಸುಡುಮದ್ದು ಬಿಡುತ್ತಿರುವುದರಿಂದ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದು ಮೇಳದ ಮೂಲಗಳು ತಿಳಿಸಿವೆ.
ದೇವರ ಚೌಕಿ ಪೂಜೆ, ಆಮೇಲೆ ರಂಗಸ್ಥಳಕ್ಕೆ ದೇವರು ಬರುವಾಗ ಪಟಾಕಿ ಬಿಡುವುದಕ್ಕೆ ಆಕ್ಷೇಪವಿಲ್ಲ. ಬಳಿಕ ಪಟಾಕಿ ಬಿಡುವಂತಿಲ್ಲ ಎಂದು ನಿಯಮ ಮಾಡಲಾಗಿದೆ.

