ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಇನ್ನಿತರೆ ಕಾರಣಗಳಿಂದ ಸ್ಕೂಟಿ ಮುಂದೆ ನಿಲ್ಲಿಸಿಕೊಳ್ಳುವುದು, ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಳ್ಳುವುದು ಹೆಚ್ಚಾಗಿದೆ. ಇದು ಅವೈಜ್ಞಾನಿಕ ಹಾಗೂ ಭಯಾನಕವೂ ಹೌದು ಎನ್ನೋದು ಪೋಷಕರ ಅರಿವಿಗೆ ಬಂದಿಲ್ಲ!
ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಟ್ರಾಫಿಕ್ ಪೊಲೀಸರು, ಬೇಜವಾಬ್ದಾರಿಯುತವಾಗಿ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವ ಪೋಷಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಮುಂದಿನ ಆರು ತಿಂಗಳ ಒಳಗಾಗಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳನ್ನು ಪರಿಷ್ಕೃತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತಾಗಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದು, 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳೂ ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಎಲ್ಲರ ಜೀವವೂ ಅತ್ಯಮೂಲ್ಯ. ಅಪಘಾತ ಯಾವಾಗ ಬೇಕಿದ್ದರೂ ಸಂಭವಿಸಬಹುದು, ಹೀಗಾಗಿ ನಿರ್ಲಕ್ಷ್ಯ ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೆಲ್ಮೆಟ್ಗಳು ಲಭ್ಯವಿದ್ದು, ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಗ್ರಾಹಕರ ಕೈಗೆಟುಕುತ್ತಿವೆ ಎಂದೂ ಅವರು ಹೇಳಿದ್ದಾರೆ. ಮಕ್ಕಳಿಗೆ ಹೆಲ್ಮಟ್ ಕೊಡಿಸುವುದರಲ್ಲಿ ಬೆಂಗಳೂರಿನ ಪೋಷಕರು ಹಿಂದೆ ಉಳಿದಿದ್ದು, ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ರೂಲ್ಸ್ ಫಾಲೋ ಮಾಡಲು ಪೋಷಕರು ವಿಫಲರಾದಲ್ಲಿ ದಂಡ ವಿಧಿಸಲಾಗುವುದು.

