ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕಕ್ಕೆ ಜಲ ಜೀವನ ಮಿಷನ್ ನಿಧಿ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಕರ್ನಾಟಕದೆಡೆಗಿನ ಮಲತಾಯಿ ಧೋರಣೆ ಹೊಸದೇನಲ್ಲದೆ, ಪ್ರತಿವರ್ಷವೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ಸರ್ಕಾರದ ವಲಯದಲ್ಲಿ ವ್ಯಕ್ತವಾಗಿದೆ.
ಜಲ ಜೀವನ ಮಿಷನ್ ಯೋಜನೆಗೆ 2024–25ರಲ್ಲಿ ಕೇಂದ್ರ 3,804 ಕೋಟಿ ಅನುದಾನ ಘೋಷಿಸಿದರೂ, ಬಿಡುಗಡೆಗೊಂಡಿದ್ದು ಕೇವಲ 570 ಕೋಟಿಯಷ್ಟೇ. ಬಾಕಿ ಮೊತ್ತಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಲವು ಬಾರಿ ಪತ್ರ ಬರೆದು ಒತ್ತಾಯಿಸಿದರೂ ಸ್ಪಂದನೆ ಸಿಗದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಯೋಜನೆಗಳ ಜಾರಿಗೆ ರಾಜ್ಯವೇ ಮುಖ್ಯವಾಗಿ ವೆಚ್ಚ ಭರಿಸುತ್ತಿರುವುದರಿಂದ ಹಣಕಾಸಿನ ಒತ್ತಡವೂ ಹೆಚ್ಚಾಗಿದೆ ಎಂದರು.
ಕೇಂದ್ರದ ಈ ನಡೆ ರಾಜ್ಯದ ಅಭಿವೃದ್ಧಿಗೆ ಘಾಸಿ ತರುತ್ತಿದೆ ಎಂಬ ಟೀಕೆಯನ್ನು ಖರ್ಗೆ ವ್ಯಕ್ತಪಡಿಸಿದ್ದು, ಕರ್ನಾಟಕದ ಪರವಾಗಿ ಬಿಜೆಪಿ ನಾಯಕರು ಧ್ವನಿ ಎತ್ತದಿರುವುದು ರಾಜಕೀಯ ನೈತಿಕತೆಯ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಮಾತುಕತೆ ಸ್ಪಷ್ಟವಾಗಬೇಕು ಎಂಬ ಅಭಿಪ್ರಾಯವು ಸರ್ಕಾರದ ಶ್ರೇಣಿಯಲ್ಲಿ ವ್ಯಕ್ತವಾಗಿದೆ.

