ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಕ್ಕಾ ಜಲಸಂಧಿ ಮತ್ತು ಬಂಗಾಳಕೊಲ್ಲಿ ಕರಾವಳಿ ಪ್ರದೇಶಗಳಲ್ಲಿ ಸೆನ್ಯಾರ್ ಚಂಡಮಾರುತ ಭೀತಿ ಶುರುವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಭಾರತ ಮತ್ತು ಕರಾವಳಿ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ದಕ್ಷಿಣದ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ನವೆಂಬರ್ 25 ರಿಂದ ಮತ್ತು 30ರ ನಡುವೆ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ನವೆಂಬರ್ 24 ರಿಂದ 26ರವರೆಗೆ ಕೇರಳ ಮತ್ತು ಮಾಹೆಯಲ್ಲಿ ಅತಿವೃಷ್ಟಿ ಉಂಟಾಗುವ ಭೀತಿ ಎದುರಾಗಿದೆ. ಇನ್ನು ನವೆಂಬರ್ 24 ರಂದು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಕೂಡ ನವೆಂಬರ್ 25 ಮತ್ತು 29 ರಂದು ಭಾರೀ ಮಳೆಯಾಗಲಿದೆ ಎನ್ನಲಾಗಿದೆ. ಪೂರ್ವ ಕರಾವಳಿಯ ಭಾಗಗಳಲ್ಲಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ನವೆಂಬರ್ 29 ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ನವೆಂಬರ್ 30 ರಂದು ಇನ್ನಷ್ಟು ತೀವ್ರಗೊಳ್ಳಬಹುದು.
ತಮಿಳುನಾಡು, ಕೇರಳ, ಮಾಹೆ, ಲಕ್ಷದ್ವೀಪ, ಆಂಧ್ರಪ್ರದೇಶ, ಯಾನಂ, ಹಾಗೂ ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳ ಕೆಲಭಾಗಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೇಯಾಗುವ ನಿರೀಕ್ಷೆಯಿದ್ದು, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಈ ವೇಳೆ ಸ್ಥಳೀಯ ಕೆಲ ಪ್ರದೇಶಗಳು ಜಲಾವೃತ ಅಥವಾ ಪ್ರವಾಹಕ್ಕೊಳಗಾಗಿ ಸಾರಿಗೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಈ ಹಿನ್ನಲೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಆ ಭಾಗದ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಸೂಚಿಸಲು ಹವಾಮಾನ ಇಲಾಖೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದೆ.
ಏನಿದು ಸೆನ್ಯಾರ್?
ಈ ಚಂಡ ಮಾರುತಕ್ಕೆ ಸೆನ್ಯಾರ್ ಎಂದು ಏಕೆ ಹೆಸರಿಡಲಾಗಿದೆ. ಹಾಗೆಂದರೆ ಏನು ಅರ್ಥ ಎಂಬ ಪ್ರಶ್ನೆ ಮೂಡುವುದು ಸಹಜ. ಸೆನ್ಯಾರ್ ಪದದ ಮೂಲ ಅರ್ಥ ಸಿಂಹ. ಈ ಪದ ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೂಚಿಸಿದೆ. ಅನೇಕ ರಾಜ್ಯಗಳಲ್ಲಿ ಪ್ರಬಲ ಗಾಳಿ, ಭಾರೀ ಮಳೆ ಮತ್ತು ಹಲವು ಅನಾಹುತಗಳ ಭೀತಿಯನ್ನುಂಟು ಮಾಡುವ ಈ ಸೈಕ್ಲೋನ್ ಬಗ್ಗೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಮೊದಲೇ ಎಚ್ಚರಿಕೆ ನೀಡಿದೆ.

