Wednesday, November 26, 2025

ಬಾಹ್ಯಾಕಾಶದಲ್ಲಿನ ಅನುಭವ ಸಂಪೂರ್ಣ ವಿಭಿನ್ನ: ವಿದ್ಯಾರ್ಥಿಗಳ ಜತೆ ಮನದಾಳ ತೆರೆದಿಟ್ಟ ಗಗನಯಾನಿ ಶುಭಾಂಶು ಶುಕ್ಲಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ನೆಹರು ತಾರಾಲಯದಲ್ಲಿ ಗಗನಯಾನಿ ಶುಭಾಂಶು ಶುಕ್ಲಾ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಿಸಿದ ಶುಕ್ಲಾ, ಬಾಹ್ಯಾಕಾಶದ ತಮ್ಮ ಅನುಭವವನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶುಭಾಂಶು ಶುಕ್ಲಾ, ಗಗನಯಾತ್ರೆಯ ವೇಳೆ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸವಾಲುಗಳನ್ನು ಹಂಚಿಕೊಂಡರು. ಪರೀಕ್ಷೆಗೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದರೂ, ಪ್ರಶ್ನೆಪತ್ರಿಕೆ ನೋಡಿದಾಗ ಹೇಗೆ ಕ್ಷಣ ಮಾತ್ರದಲ್ಲಿ ಎಲ್ಲವೂ ಮರೆತುಹೋಗುತ್ತದೋ, ರಾಕೆಟ್ ಲಾಂಚ್ ವೇಳೆಯಲ್ಲಿ ನನಗೂ ಹಾಗೆ ಆಗಿತ್ತು ಎಂದು ಹೇಳಿಕೊಂಡರು.

ಫೈಟರ್ ಪೈಲಟ್ ಆಗಿರುವುದರಿಂದ ಎಲ್ಲವನ್ನೂ ನಿಭಾಯಿಸಬಹುದು ಎಂಬ ಆತ್ಮವಿಶ್ವಾಸವಿದ್ದರೂ, ಬಾಹ್ಯಾಕಾಶದಲ್ಲಿನ ಅನುಭವ ಸಂಪೂರ್ಣ ವಿಭಿನ್ನವಾಗಿತ್ತು . ಸ್ಪೇಸ್ ಸ್ಟೇಷನ್‌ಗೆ ಹೋದಾಗ ನನ್ನ ಕೈ ಈಗಿರುವುದಕ್ಕಿಂತ ಎಂಟು ಪಟ್ಟು ಭಾರವಾಗಿದೆ ಎನ್ನಿಸುತ್ತಿತ್ತು. ಗಾಳಿಯಲ್ಲಿ ತೇಲುವ ಪರಿಸ್ಥಿತಿ, ಗೋಡೆಗಳ ಮೇಲೆ ಚಲಿಸುವ ಅನುಭವಕ್ಕೆ ಹೊಂದಿಕೊಳ್ಳಲು ನನಗೆ ಏಳು–ಎಂಟು ದಿನಗಳು ಹಿಡಿದವು ಎಂದರು.

ಬಾಹ್ಯಾಕಾಶದಲ್ಲಿನ ಸ್ಥಿತಿಗತಿಗಳ ಬಗ್ಗೆ ಮಕ್ಕಳಿಗೆ ಹೇಳುತ್ತಾ, ಸ್ಪೇಸ್​ನಲ್ಲಿರುವ ತೂಕವಿಲ್ಲದ ಸ್ಥಿತಿಯಿಂದಾಗಿ ಗಗನಯಾತ್ರಿಗಳು ಭಾರವಾದ ವಸ್ತುಗಳನ್ನೂ ಸುಲಭವಾಗಿ ಎತ್ತಬಹುದು. 5 ಕೆಜಿ ತೂಕವೂ ಅಲ್ಲಿ ತೀರಾ ಕಡಿಮೆ ಎನಿಸುತ್ತಿತ್ತು. ಬಾಹ್ಯಾಕಾಶದಲ್ಲಿದ್ದಾಗ ಹಸಿವು ಎನ್ನುವುದೇ ತಿಳಿಯದ ಮಟ್ಟಿಗೆ ದೇಹ ಹೊಂದಿಕೊಂಡಿತ್ತು. ಭೂಮಿಗೆ ಮರಳಿ ಬಂದ ತಕ್ಷಣ ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಬೆನ್ನುನೋವಿನ ಸಮಸ್ಯೆಯೂ ಉಂಟಾಗಿತ್ತು. ಕೆಲ ಗಂಟೆಗಳ ಕಾಲ ನನ್ನ ಎತ್ತರವೂ ಸ್ವಲ್ಪ ಹೆಚ್ಚಾಗಿತ್ತು. ಆದರೆ ದಿನಗಳು ಕಳೆದಂತೆ ನಾನು ಸಹಜ ಸ್ಥಿತಿಗೆ ಮರಳಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ, ಶುಭಾಂಶು ಶುಕ್ಲಾ ಸ್ಪೇಸ್‌ನಿಂದ ಬೆಂಗಳೂರನ್ನು ಸೆರೆ ಹಿಡಿದಿರುವ ವಿಶೇಷ ವಿಡಿಯೋವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

error: Content is protected !!