ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಒಟ್ಟಾವಾದಲ್ಲಿ ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳು ಆಯೋಜಿಸಿದ್ದ ‘ಖಲಿಸ್ತಾನ್ ರೆಫರೆಂಡಂ’ ಕಾರ್ಯಕ್ರಮದಲ್ಲಿ ಭಾರತದ ಧ್ವಜವನ್ನು ಕೆಳಗಿಳಿಸಿ ಅವಮಾನ ಮಾಡಿದ ಘಟನೆ ನಡೆದಿದೆ.
ಭಾರತ UAPA ಕಾಯ್ದೆಯಡಿ ನಿಷೇಧಿಸಿಸಲ್ಪಟ್ಟ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಅವಮಾನಿಸಲಾಗಿದೆ. ಅಲ್ಲದೇ ಭಾರತೀಯ ವಿರೋಧಿ ಹಾಗೂ ಹಿಂಸಾತ್ಮಕ ಘೋಷಣೆಗಳನ್ನು ಕೂಗಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ಖಲಿಸ್ತಾನ್ಗಾಗಿ ಜನಾಭಿಪ್ರಾಯ ಸಂಗ್ರಹಿಸಲು ಮತದಾರರ ನೋಂದಣಿಯನ್ನು ಆರಂಭಿಸುವುದಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಘೋಷಿಸಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಮ್ಯಕ್‌ನ್ಯಾಬ್ ಸಮುದಾಯ ಕೇಂದ್ರದ ಬಳಿ ಆಯೋಜಿಸಲಾಗಿದ್ದ ಮತದಾನ ಪ್ರಕ್ರಿಯೆಯಲ್ಲಿ ಈ ದುಷೃತ್ಯ ಎಸಗಲಾಗಿದ್ದು, ಖಾಲಿಸ್ತಾನ್ ಧ್ವಜಗಳನ್ನು ಹಿಡಿದ ಬೆಂಬಲಿಗರು ಭಾರತೀಯ ಧ್ವಜವನ್ನು ಅವಮಾನಿಸಿದ ದೃಶ್ಯವುಳ್ಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಕೆಲವರು ಭಾರತೀಯ ನಾಯಕರನ್ನು ಗುರಿಯಾಗಿಸಿಕೊಂಡು ಘೋಷವಾಕ್ಯಗಳನ್ನು ಕೂಗಿದ್ದು, ಭಾರತೀಯ ನಾಯಕರನ್ನು ಹತ್ಯೆ ಮಾಡಿ ಎಂಬಂತಹ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಒಂಟಾರಿಯೋ, ಅಲ್ಬರ್ಟಾ, ಬ್ರಿಟಿಷ್ ಕೊಲಂಬಿಯಾ ಮತ್ತು ಕ್ವೆಬೆಕ್ ಪ್ರಾಂತ್ಯಗಳಿಂದ ಬಂದ ಸುಮಾರು 53,000ಕ್ಕೂ ಹೆಚ್ಚು ಸಿಖ್‌ಗಳು ಭಾಗವಹಿಸಿದ್ದಾರೆ ಎಂದು SFJ ಹೇಳಿದ್ದು, ನವಜಾತ ಶಿಶುಗಳಿಂದ ಹಿಡಿದು ವಯೋವೃದ್ಧರ ವರೆಗೆ ದಿನವಿಡೀ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಮಂಡಿಸಿದ್ದಾರೆಂದು ಸಂಘಟನೆ ಹೇಳಿದೆ. ಸುಮಾರು ಎರಡು ಕಿಲೋಮೀಟರ್ ಉದ್ದಕ್ಕೂ ಹೆಚ್ಚು ಜನ ಕಿಕ್ಕಿರಿದ್ದು ಸೇರಿದ್ದರು ಎನ್ನಲಾಗಿದ್ದು, ಅವಧಿ ಮುಗಿದ ನಂತರವೂ ಮತದಾನ ಪ್ರಕ್ರಿಯೆ ನಡೆಸಿರುವುದು ಕಂಡು ಬಂದಿದೆ.
ಸಂಘಟನೆಯ ಕಾನೂನು ಸಲಹೆಗಾರ ಹಾಗೂ ಭಾರತದಿಂದ ಉಗ್ರವಾದಿಯಾಗಿ ಘೋಷಿಸಲ್ಪಟ್ಟ ಗುರ್ಪಟ್ವಂತ್ ಸಿಂಗ್ ಪನ್ನೂ ಸ್ಯಾಟಲೈಟ್ ಸಂದೇಶದ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ20 ಸಭೆಯ ವೇಳೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತು ಪನ್ನೂ ಪ್ರಶ್ನಿಸಿದ್ದು, ಆ ಭೇಟಿ ಅನುಮಾನಾಸ್ಪದ ಎಂದು SFJ ಬಿಂಬಿಸಿದೆ. ಕೆನಡಾದಲ್ಲಿ ಖಾಲಿಸ್ತಾನ ಪರ ಚಟುವಟಿಕೆಗಳು ಹೆಚ್ಚುತ್ತಿರುವ ಸಮಯದಲ್ಲಿ ಈ ಭೇಟಿ ನಡೆದಿದೆ ಎಂಬುದನ್ನು SFJ ಒತ್ತಿ ಹೇಳಿದೆ.

