ಹೊಸ ದಿಗಂತ ವರದಿ, ಯಾದಗಿರಿ:
ಶಹಾಪುರ ತಾಲೂಜಿನ ಭೀಮರಾಯನ ಗುಡಿಯ ಕೆಬಿಜೆಎನ್ ಎಲ್ ಮುಖ್ಯ ಇಂಜನೀಯರ್ ಪ್ರೇಮ್ ಸಿಂಗ್ ರಿಕುಸಿಂಗ್ ರಾಠೋಡ್ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತರಿಂದ ಮಂಗಳವಾರ ದಿಢೀರ್ ದಾಳಿ ನಡೆಸಿ ನಗದು ಮಹತ್ವದ ದಾಖಲೆ ವಶಪಡಿಸಿಕೊಂಡ ಘಟನೆ ನಡೆದಿದೆ.
ಭೀ.ಗುಡಿಯ ಕೆಬಿಜೆ ಎನ್ ಎಲ್ ವಸಹಾತುವಿನಲ್ಲಿ ವಾಸವಿರುವ ಮುಖ್ಯ ಇಂಜಿನಿಯರ್ ರಾಥೋಡರವರು ಅಕ್ರಮ ಆಸ್ತಿಯೊಂದಿಗೆ ಭ್ರಷ್ಟಾಚಾರ ನಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತರಾಯ್ ನೇತೃತ್ವದಲ್ಲಿ ಲಗ್ಗೆ ಇಟ್ಟ ತಂಡ ಗಂಟೆಗಟ್ಟಲೆ ಪರಿಶೀಲನೆ ನಡೆಸಿದ ವೇಳೆಯಲ್ಲಿ 83000 ರೂ ನಗದು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ ಬಳಿಕ ಮುಖ್ಯ ಕಚೇರಿಯಲ್ಲಿರುವ ದಾಖಲೆಗಳನ್ನು ನಾಲ್ಕು ಗಂಟೆಗೂ ಅಧಿಕಕಾಲ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಪಿ.ಐ.ಸಂಗಮೇಶ,ಮಲ್ಲಿಕಾರ್ಜುನ ಮಡಿವಾಳ ಹಾಗೂ ಸತೀಶ್ ನರಸನಾಯಕ ಇತರ ಅಧಿಕಾರಿಗಳು ಇದ್ದರು.

