Wednesday, November 26, 2025

ಶಬರಿಮಲೆ ಭೇಟಿ ನೀಡುವ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ಸವಿಯಲು ಸಿಗಲಿದೆ ‘ಕೇರಳ ಸದ್ಯ’!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಶೀಘ್ರದಲ್ಲೇ “ಕೇರಳ ಸದ್ಯ”ವನ್ನು ಸವಿಯಬಹುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮಂಗಳವಾರ ತಿಳಿಸಿದೆ.

ಬೆಟ್ಟದ ದೇವಾಲಯದಲ್ಲಿ ಅನ್ನದಾನದ ಭಾಗವಾಗಿ ಇಲ್ಲಿಯವರೆಗೂ ಪುಲಾವ್ ಮತ್ತು ಸಾಂಬಾರ್ ನೀಡಲಾಗುತ್ತಿತ್ತು. ಇದು ಭಕ್ತರಿಗೆ ಸೂಕ್ತವಲ್ಲ ಎಂದು ಹೇಳಿರುವ ಮಂಡಳಿಯು ‘ಪಾಯಸ’ (ಸಿಹಿ ಕಡುಬು) ಮತ್ತು ಪಪ್ಪಡ್‌ ಜೊತೆಗೆ ‘ಕೇರಳ ಸದ್ಯ’ ನೀಡಲು ನಿರ್ಧರಿಸಿದೆ ಎಂದು ಟಿಡಿಬಿ ಅಧ್ಯಕ್ಷ ಕೆ ಜಯಕುಮಾರ್ ತಿಳಿಸಿದರು.

ಅನ್ನದಾನಕ್ಕೆ ದೇವಸ್ವಂ ಮಂಡಳಿಯಿಂದ ಹಣವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದು ಅಯ್ಯಪ್ಪ ಭಕ್ತರಿಗೆ ಉತ್ತಮ ಆಹಾರ ಒದಗಿಸಲು ಭಕ್ತರು ಮಂಡಳಿಗೆ ನೀಡಿರುವ ನಿಧಿಯಾಗಿದೆ. ಶಬರಿಮಲೆಯಲ್ಲಿ ಅನ್ನದಾನದ ಗುಣಮಟ್ಟ ಖಾತ್ರಿ ಹೊಣೆ ಹೊಂದಿರುವ ಮಂಡಳಿಯು ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ಈಗಾಗಲೇ ಆಯಾ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಬುಧವಾರ ಅಥವಾ ಗುರುವಾರದಿಂದ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಶಬರಿಮಲೆ ಮಾಸ್ಟರ್ ಪ್ಲಾನ್ ಕುರಿತು ಚರ್ಚಿಸಲು ಮತ್ತು ಮುಂದಿನ ವರ್ಷದ ವಾರ್ಷಿಕ ಯಾತ್ರೆಯ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಡಿಸೆಂಬರ್ 18 ರಂದು ಪರಿಶೀಲನಾ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು.

error: Content is protected !!