ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನ. 28ರಂದು ಶ್ರೀಕೃಷ್ಣ ಮಠದದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬರುವ ಹಿನ್ನೆಲೆಯಲ್ಲಿ ಮಂಗಳವಾರ ಎಸ್ ಪಿಜಿ ತಂಡ ಕಾರ್ಯಕ್ರಮದ ಸಿದ್ಧತೆ ಮತ್ತು ವೇದಿಕೆ ನಿರ್ಮಾಣ ಕಾರ್ಯದ ಪರಿಶೀಲನೆಯನ್ನು ಎಸ್ ಜಿ ಪಿ ತಂಡ ನಡೆಸಿತು.
ನರೇಂದ್ರ ಮೋದಿ ರೋಡ್ ಶೋ ನಡೆಸುವ ಬನ್ನಂಜೆ, ಜಯಲಕ್ಷ್ಮೀ ಸಿಲ್ಕ್ಸ್ ಬಳಿಯ ಪಾಯಿಂಟ್ ಹಾಗೂ ಕಳ್ಸಂಕದ ಸ್ಥಳಗಳನ್ನು ಎಸ್ ಪಿಜಿ ತಂಡ ಪರಿಶೀಲಿಸಿದೆ. ಅಲ್ಲದೇ ಶ್ರೀಕೃಷ್ಣ ಮಠದ ಸುತ್ತಮುತ್ತ, ಗೀತಾ ಮಂದಿರ, ಅನ್ನಛತ್ರ ಸೇರಿ ಹಲವೆಡೆ ಪರಿಶೀಲನೆ ನಡೆಸಿದೆ.
ಹೆಲಿಪ್ಯಾಡ್ ಪರಿಶೀಲನೆ ಎಸ್ ಪಿಜಿ ತಂಡಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉಡುಪಿ ಎಸ್‌ಪಿ ಹರಿರಾಮ್ ಶಂಕರ್, ಶಾಸಕ ಯಶ್‌ಪಾಲ್ ಎ. ಸುವರ್ಣ ಸಾಥ್ ನೀಡಿದರು.
ಈಗಾಗಲೇ ಜಿಲ್ಲಾಡಳಿತವು ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿದೆ. ಭದ್ರತೆಗೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಯುವ ಸ್ಥಳ, ರಸ್ತೆ ಹಾಗೂ ಮತ್ತಿತರ ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಅನಧಿಕೃತ ಬ್ಯಾನರ್, ಬಂಟಿಂಗ್ಸ್‌ಗಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಲಾಗಿದೆ. ಮಠದ ಆವರಣದಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ಪಾಸ್ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ಮಠ ಪ್ರವೇಶದ ಮಾರ್ಗಗಳಲ್ಲಿ ನಿಗದಿತ ನಿಯಮಗಳನ್ನು ಪಾಲಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.
ರೋಡ್ ಶೋದಲ್ಲಿ 30 ಸಾವಿರ ಮಂದಿ ಭಾಗಿ
ನ.28 ರ ಬೆಳಿಗ್ಗೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ’ರೋಡ್ ಶೋ’ ಉಡುಪಿ-ಬನ್ನಂಜೆಯ ಡಾ. ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸoಕ ಜಂಕ್ಷನ್ ವರೆಗೆ ಸಾಗಲಿದೆ.
ಕಲ್ಸoಕ ರಸ್ತೆಯಿಂದ ನೇರವಾಗಿ ಪಾಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ ಗಂಟೆ 12.೦00ಕ್ಕೆ ಶ್ರೀ ಕೃಷ್ಣ ಮಠಕ್ಕೆ ತೆರಳಲಿದ್ದಾರೆ. ಮೋದಿ ಅವರ ’ರೋಡ್ ಶೋ’ ಮಾರ್ಗದ ಮೂರು ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷದಾರಿಗಳ ಪ್ರದರ್ಶನ ಇತ್ಯಾದಿ ಇರಲಿವೆ. ರಸ್ತೆ ಮಾರ್ಗದ ಬದಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಆ ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರಕ್ಕೂ ಅಧಿಕ ಜನರು ನಿಂತು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಬೆಳಿಗ್ಗೆ 10.30ರೊಳಗೆ ಬನ್ನಂಜೆ-ಕಲ್ಸoಕ ರಸ್ತೆಯ ಇಕ್ಕೆಲಗಳಲ್ಲಿ ಉಪಸ್ಥಿತರಿರುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸೂಚಿಸಿದ್ದಾರೆ.

