Wednesday, November 26, 2025

ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಬೆಳಗ್ಗೆ 5 ಗಂಟೆಯಿಂದಲೇ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಬ್ಬ ಹಾಗೂ ವಾರಾಂತ್ಯ ರಜೆ ವೇಳೆ ಜನರು ಊರು ಹಾಗೂ ಪ್ರವಾಸಕ್ಕೆ ತೆರಳಿದ ಜನರು ಸೋಮವಾರ ಬೆಂಗಳೂರಿಗೆ ಮರಳುತ್ತಾರೆ. ಇದರಿಂದ ಸಹಜವಾಗಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಳದಿ ಮಾರ್ಗದ ರೈಲು ಸಂಚಾರವನ್ನು ಸೋಮವಾರದಂದು ಬೇಗ ಆರಂಭಿಸಲು ನಿರ್ಧರಿಸಿದೆ.

ಇನ್ನು ಮುಂದೆ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುಗಳು ಸೋಮವಾರ ಬೆಳಿಗ್ಗೆ 5:05 ಗಂಟೆಗೆ ಆರಂಭವಾಗಲಿವೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಯಾ ಎಲೆಕ್ಟ್ರಾನಿಕ್ಸ್, ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿದೆ.

ಈ ವಿಶೇಷ ವ್ಯವಸ್ಥೆ ಕೇವಲ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮರು ದಿನ ಮಂಗಳವಾರದಿಂದ ಹಳದಿ ಮಾರ್ಗದ ಮೆಟ್ರೋ ಸೇವೆಗಳು ಎಂದಿನಂತೆ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಲಿವೆ.

ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸೇವೆಗಳು ಬೇಗನೆ ಪ್ರಾರಂಭವಾಗುವುದರಿಂದ, ಹಳದಿ ಮಾರ್ಗದಲ್ಲೂ ಸೇವೆ ಒದಗಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದರು, ಪ್ರಯಾಣಿಕರ ಪ್ರತಿಭಟನೆ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸೋಮವಾರ ಬೆಳಿಗ್ಗೆ ತಮ್ಮ ಊರುಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ಸೋಮವಾರದ ವೇಳಾಪಟ್ಟಿಯನ್ನು ಎಲ್ಲಾ ಹಳದಿ ಮಾರ್ಗದ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

error: Content is protected !!