ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆ ಬಳಿ ನಡೆದ ಆತ್ಮಾಹುತಿ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯವು ತನ್ನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಈ ಸಂಬಂಧ, ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗವು ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ವಿಶ್ವವಿದ್ಯಾಲಯದ ವಿಶೇಷ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿದೆ.
ಡಿ. 4 ರಂದು ವಿಚಾರಣೆ
ಆಯೋಗವು ಈ ನೋಟಿಸ್ ಕುರಿತು ಡಿಸೆಂಬರ್ 4 ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ವೇಳೆ, ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತಮ್ಮ ಅಭಿಪ್ರಾಯಗಳನ್ನು ಆಯೋಗದ ಮುಂದೆ ಮಂಡಿಸಲಿದ್ದಾರೆ.
ವಿಶ್ವವಿದ್ಯಾಲಯಕ್ಕೆ ವಿಶೇಷ ಸ್ಥಾನಮಾನ ನೀಡಿದ ಅಲ್ಪಸಂಖ್ಯಾತ ಸಮುದಾಯವು ಈಗಲೂ ವಿಶ್ವವಿದ್ಯಾಲಯವನ್ನು ನಿರ್ವಹಿಸುತ್ತಿದೆಯೇ ಅಥವಾ ಅದರ ಮಾಲೀಕತ್ವ ಹಾಗೂ ನಿಯಂತ್ರಣದಲ್ಲಿ ಯಾವುದೇ ಬದಲಾವಣೆ ಆಗಿದೆಯೇ ಎಂಬುದನ್ನು ಆಯೋಗವು ತನಿಖೆ ಮಾಡಲಿದೆ. ಈ ವಿಚಾರಣೆ ಬಳಿಕವೇ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಆಯೋಗವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ವಿವಿ ಸಿಬ್ಬಂದಿ ಬಂಧನ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ ಫರಿದಾಬಾದ್‌ನ ನಿವಾಸಿಯೊಬ್ಬರನ್ನು ಬಂಧಿಸಿದೆ. ಬಂಧಿತನನ್ನು ಹರಿಯಾಣದ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯಾ ದಾಳಿಕೋರ ಡಾ. ಉಮರ್-ಉನ್ ನಬಿಗೆ ಲಾಜಿಸ್ಟಿಕ್ಸ್ ಮತ್ತು ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದಾನೆ.
ಸೋಯಾಬ್, ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಉಮರ್‌ಗೆ ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ರಾಸಾಯನಿಕಗಳನ್ನು ಖರೀದಿಸಲು ನೆರವು ನೀಡಿದ್ದನು ಎಂದು NIA ಆರೋಪಿಸಿದೆ.
ಭಯೋತ್ಪಾದಕನ ಅಡಗುತಾಣ
ಸ್ಫೋಟಕ್ಕೆ ಸ್ವಲ್ಪ ಮೊದಲು, ಸೋಯಾಬ್ ಹರಿಯಾಣದ ನುಹ್‌ನ ಹಿದಾಯತ್ ಕಾಲೋನಿಯಲ್ಲಿರುವ ತನ್ನ ಅತ್ತಿಗೆಯ ಮನೆಯಲ್ಲಿ ಉಮರ್‌ಗೆ ಮನೆ ಬಾಡಿಗೆಗೆ ಕೊಡಿಸಿದ್ದನು. ದಾಳಿಯ ಸಮಯದಲ್ಲಿ ಉಮರ್ ಈ ಮನೆಯನ್ನು ಅಡಗುತಾಣವಾಗಿ ಬಳಸಿಕೊಂಡಿದ್ದ ಮತ್ತು ಇಲ್ಲಿಯೇ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ, ಉಮರ್ i20 ಕಾರಿನಲ್ಲಿ ಫಿರೋಜ್‌ಪುರ್ ಝಿರ್ಕಾಗೆ ಪ್ರಯಾಣಿಸಿದ್ದ. ಅಲ್ಲಿ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಿ, ಮುಂಬೈ ಎಕ್ಸ್‌ಪ್ರೆಸ್‌ವೇ ಮೂಲಕ ಬದರ್ಪುರ್ ಮೂಲಕ ದೆಹಲಿ ಪ್ರವೇಶಿಸಿ, ಅಂತಿಮವಾಗಿ ಕೆಂಪುಕೋಟೆಯನ್ನು ತಲುಪಿದ್ದ ಎಂದು ವರದಿಯಾಗಿದೆ.

