ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬಿಗೆ ಯೋಗ್ಯ ಬೆಲೆಗೆ ಆಗ್ರಹಿಸಿ ಸಮೀರವಾಡಿ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕಾರಣರಾಗಿದ್ದ 17 ಜನ ಕಿಡಿಗೇಡಿಗಳನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರೈತರಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಆಸ್ತಿಪಾಸ್ತಿ ಹಾನಿ ಮತ್ತು ಕಲ್ಲುತೂರಾಟ ನಡೆಸಿದವರು ಎಂದು ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯೆಲ್ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸಾಕ್ಷಿ ಆಧಾರದ ಮೇಲೆ ಬಂಧನ
ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ ಮತ್ತು ಕಲ್ಲು ತೂರಾಟ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಸ್ಥಳದಲ್ಲಿ ಚಿತ್ರೀಕರಿಸಿದ ವಿಡಿಯೋ ತುಣುಕುಗಳನ್ನು ‘ಬ್ರಹ್ಮಾಸ್ತ್ರ’ವಾಗಿ ಬಳಸಿಕೊಂಡಿದ್ದಾರೆ. ವಿಡಿಯೋ ಸಾಕ್ಷ್ಯಾಧಾರಗಳ ಮೂಲಕ ಯಾವ ಆರೋಪಿ ಯಾವ ಕೃತ್ಯ ಎಸಗಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕವೇ ಬಂಧನ ಪ್ರಕ್ರಿಯೆ ನಡೆಸಲಾಗಿದೆ.
ಬಂಧಿತ 17 ಮಂದಿಯಲ್ಲಿ 13 ಜನರು ರೈತರ ಪರ ನಿಂತು ಕಲ್ಲು ತೂರಿದ್ದರೆ, ಇನ್ನ ನಾಲ್ವರು ಕಾರ್ಖಾನೆ ಕಡೆಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಈ ಮೂಲಕ ಘಟನೆಗೆ ಉಭಯ ಕಡೆಯಿಂದಲೂ ಕಿಡಿಗೇಡಿಗಳೇ ಕಾರಣರಾಗಿದ್ದರು ಎಂಬುದು ಬಯಲಾಗಿದೆ. ಆರೋಪಿಗಳು ಮುಧೋಳ ಹಾಗೂ ರಬಕವಿಬನಹಟ್ಟಿ ತಾಲ್ಲೂಕಿನ ವಿವಿಧ ಗ್ರಾಮದವರಾಗಿದ್ದಾರೆ.
ಲಕ್ಷಾಂತರ ರೂ. ಮೌಲ್ಯದ ಹಾನಿ, ಎಎಸ್ಐಗೆ ಗಾಯ
ಬಂಧಿತ ಕಿಡಿಗೇಡಿಗಳು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. “ಬೆಂಕಿ ಹಚ್ಚಿದ್ದು ಮತ್ತು ಕಲ್ಲು ತೂರಿದ್ದು ತಾವೇ” ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಗೋಯೆಲ್ ತಿಳಿಸಿದ್ದಾರೆ. ಈ ಹಿಂಸಾಚಾರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ, ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ 40-50 ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾಗಿತ್ತು.
ಈ ಘಟನೆಯಲ್ಲಿ ಒಬ್ಬ ಎಎಸ್ಐ ಕಾಲು ಮುರಿದಿದ್ದರೆ, ಹಲವು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಬೇರೆ ಕೆಲವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ರೈತರ ಶಾಂತಿಯುತ ಪ್ರತಿಭಟನೆಯನ್ನು ದುಷ್ಕರ್ಮಿಗಳು ಹಿಂಸಾಚಾರಕ್ಕೆ ತಿರುಗಿಸಿರುವುದು ಈಗ ಬಯಲಾಗಿದೆ.

