Friday, November 28, 2025

ಅತ್ತ 60 ಲಕ್ಷ ವರದಕ್ಷಿಣೆ, ಇತ್ತ ವಂಚಕ ಪತಿ: ‘ಕಾಂಚಾಣ’ ದಾಹಕ್ಕೆ ಬಲಿಯಾದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭದ್ರಾವತಿ ತಾಲ್ಲೂಕಿನ ಡಿ.ಬಿ. ಹಳ್ಳಿಯ ನವವಿವಾಹಿತೆ ಲತಾ ಅವರು ಪತಿ ಮತ್ತು ಆತನ ಕುಟುಂಬ ಸದಸ್ಯರ ನಿರಂತರ ವರದಕ್ಷಿಣೆ ಕಿರುಕುಳ ಮತ್ತು ಪತಿಯ ಅಕ್ರಮ ಸಂಬಂಧದ ನೋವು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಘಟನೆ ನಡೆದು ಮೂರು ದಿನಗಳಾಗಿದ್ದರೂ ಲತಾ ಅವರ ಮೃತದೇಹ ಪತ್ತೆಯಾಗಿಲ್ಲ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಲತಾ ಅವರ ಪತಿ, ಭದ್ರಾ ಡ್ಯಾಂನ ಕೆಪಿಸಿಎಲ್‌ನಲ್ಲಿ ಎಇಇ ಆಗಿರುವ ಗುರುರಾಜ್ ಮತ್ತು ಆತನ ಕುಟುಂಬಸ್ಥರು ಮನೆಯಿಂದ ಪರಾರಿಯಾಗಿದ್ದಾರೆ. ಗುರುರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.

ಮದುವೆ, ವರದಕ್ಷಿಣೆ ಮತ್ತು ಕಿರುಕುಳ:

ಶಿಕಾರಿಪುರ ತಾಲ್ಲೂಕಿನ ದಿಂಡಿನಹಳ್ಳಿ ಗ್ರಾಮದ ಗುರುರಾಜ್ ಮತ್ತು ಲತಾ ಅವರ ವಿವಾಹವು 2025ರ ಏಪ್ರಿಲ್ 14ರಂದು ನೆರವೇರಿತ್ತು. ಸರ್ಕಾರಿ ಅಧಿಕಾರಿ ಎಂಬ ಕಾರಣಕ್ಕೆ ಲತಾ ಅವರ ಪೋಷಕರು ಅತ್ಯಂತ ವಿಜೃಂಭಣೆಯಿಂದ ಮದುವೆ ಮಾಡಿ, 30 ಗ್ರಾಂ ಚಿನ್ನಾಭರಣ, ₹10 ಲಕ್ಷ ನಗದು ಸೇರಿ ಅಂದಾಜು ₹60 ಲಕ್ಷ ಮೌಲ್ಯದ ವರದಕ್ಷಿಣೆಯನ್ನು ನೀಡಿದ್ದರು.

ಆದರೆ, ಇಷ್ಟೆಲ್ಲಾ ಪಡೆದರೂ ಗುರುರಾಜ್ ಮತ್ತು ಅವರ ಕುಟುಂಬದ ವರದಕ್ಷಿಣೆ “ದಾಹ” ತಗ್ಗಿರಲಿಲ್ಲ. ಮದುವೆಯಾದ ಕೇವಲ ಒಂದು ತಿಂಗಳಿನಿಂದಲೇ ಕಿರುಕುಳ ಆರಂಭವಾಗಿತ್ತು. ಪತಿ ಗುರುರಾಜ್ ಅವರು ಲತಾ ಅವರನ್ನು ಸರಿಯಾಗಿ ನೋಡಿಕೊಳ್ಳದೆ ನಿರಂತರವಾಗಿ ಪೀಡಿಸುತ್ತಿದ್ದರು. ಇದರ ಜೊತೆಗೆ, ಗುರುರಾಜ್ ಅವರು ಪತ್ನಿ ಮುಂದೆಯೇ ಅಕ್ಕನ ಮಗಳೊಂದಿಗೆ ಹೆಚ್ಚು ಸಲಿಗೆಯಿಂದ ಇರುತ್ತಿದ್ದರು ಮತ್ತು ಮತ್ತೊಂದು ಯುವತಿಯೊಂದಿಗೆ ಚಾಟಿಂಗ್ ಸಹ ನಡೆಸುತ್ತಿದ್ದರು. ಈ ಎಲ್ಲಾ ಮಾನಸಿಕ ಹಿಂಸೆಯನ್ನು ಲತಾ ಅವರು ತಮ್ಮ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ತವರು ಮನೆಯಲ್ಲಿದ್ದಾಗ ನಡೆದ ದುರಂತ:

ಆಷಾಢ ಮಾಸಕ್ಕಾಗಿ ಲತಾ ಅವರು ಭದ್ರಾವತಿ ತಾಲ್ಲೂಕಿನ ಡಿ.ಬಿ. ಹಳ್ಳಿಯಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಆಷಾಢ ಮುಗಿದರೂ ಪತಿಯಾದ ಗುರುರಾಜ್ ಅವರು ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಇದರಿಂದ ಮಾನಸಿಕವಾಗಿ ತೀವ್ರವಾಗಿ ನೊಂದ ಲತಾ ಅವರು, ನವೆಂಬರ್ 23ರಂದು ಭದ್ರಾವತಿ ತಾಲ್ಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಇರುವ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್‌ನಲ್ಲಿ ಸ್ಪಷ್ಟ ಆರೋಪ:

ತನ್ನ ಸಾವಿಗೆ ಪತಿ ಗುರುರಾಜ್, ಪತಿಯ ಅಕ್ಕಂದಿರಾದ ನಾಗರತ್ನಾ, ರಾಜೇಶ್ವರಿ, ಅತ್ತೆ ಶಾರದಮ್ಮ ಮತ್ತು ಪತಿಯ ಅಕ್ಕನ ಗಂಡ ಕೃಷ್ಣಪ್ಪ ಅವರೇ ನೇರ ಕಾರಣ ಎಂದು ಲತಾ ಅವರು ಡೆತ್ ನೋಟ್‌ನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

ಮಗಳ ಈ ನಿರ್ಧಾರದಿಂದ ಕಂಗಾಲಾಗಿರುವ ಪೋಷಕರು ಮತ್ತು ಕುಟುಂಬಸ್ಥರು ನಾಲೆ ಬಳಿ ಕಣ್ಣೀರು ಹಾಕುತ್ತಿದ್ದು, ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

error: Content is protected !!