ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದವು ಈಗ ಹೈಕೋರ್ಟ್ ಮೆಟ್ಟಿಲೇರಿದೆ. ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪತ್ರಿಕೋದ್ಯಮಿ ಎನ್. ಶಾಂತಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಗುರುವಾರದವರೆಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದಂತೆ ಹೈಕೋರ್ಟ್ ಆದೇಶ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಮಪತ್ರ ಹಿಂಪಡೆದ ಅಭ್ಯರ್ಥಿಗಳೂ ಸಹ ಈ ಪ್ರಕರಣದ ವ್ಯಾಪ್ತಿಗೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ವೆಂಕಿ ಬಣದಲ್ಲಿದ್ದರೂ ನಾಮಪತ್ರವನ್ನು ಹಿಂಪಡೆದಿದ್ದ ಮಾಜಿ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ ಸೇರಿದಂತೆ ಒಟ್ಟು ಇಬ್ಬರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 27 ಕೊನೆಯ ದಿನವಾಗಿತ್ತು.
ಅವಿರೋಧ ಆಯ್ಕೆಗೆ ತಾತ್ಕಾಲಿಕ ಬ್ರೇಕ್!
ಕೆ.ಎನ್. ಶಾಂತಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಿದ ಕಾರಣ, ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಈ ಹಿಂದೆ ಪ್ರಕಟವಾಗಿತ್ತು. ಕೆಎಸ್ಸಿಎ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಗುರುವಾರ (ನವೆಂಬರ್ 27) ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ, ಹೈಕೋರ್ಟ್‌ನ ಇಂದಿನ ಆದೇಶದಿಂದಾಗಿ ಪ್ರಸಾದ್ ಅವರ ಅವಿರೋಧ ಆಯ್ಕೆಯ ಘೋಷಣೆಗೆ ತಾತ್ಕಾಲಿಕ ತಡೆಯುಂಟಾದಂತಾಗಿದೆ.
ತಿರಸ್ಕಾರಕ್ಕೆ ಕಾರಣವೇನು?
ಶಾಂತಕುಮಾರ್ ಅವರ ನಾಮಪತ್ರ ತಿರಸ್ಕಾರಕ್ಕೆ ಮುಖ್ಯ ಕಾರಣ: ಅವರು ಪ್ರತಿನಿಧಿಸುವ ಕ್ರಿಕೆಟ್ ಕ್ಲಬ್, ಲೀಗ್‌ನಲ್ಲಿ ಆಡಲು ನೋಂದಣಿ ಮಾಡಿಕೊಳ್ಳುವಾಗ ಪಾವತಿಸಬೇಕಾದ ₹200 ಸಬ್‌ಸ್ಕ್ರಿಪ್ಷನ್ ಶುಲ್ಕವನ್ನು ಪಾವತಿಸಿರಲಿಲ್ಲ ಎಂಬುದು. ಈ ತಾಂತ್ರಿಕ ಕಾರಣವನ್ನೇ ಚುನಾವಣಾಧಿಕಾರಿಗಳು ಆಧಾರವಾಗಿ ಇಟ್ಟುಕೊಂಡು ನಾಮಪತ್ರವನ್ನು ತಿರಸ್ಕರಿಸಿದ್ದರು.
ಅದೇ ರೀತಿ, ವೆಂಕಿ ಬಣದಿಂದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಅವರ ನಾಮಪತ್ರ ಕೂಡ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ ಎಂದು ವರದಿಯಾಗಿದೆ.

