Friday, November 28, 2025

ದಲಿತ ಸಿಎಂ ವಿಚಾರ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ; ಸಚಿವ ಪರಮೇಶ್ವರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಲಿತ ಮುಖ್ಯಮಂತ್ರಿ ಸ್ಥಾನದ ಕುರಿತು ಸದ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹೈಕಮಾಂಡ್ ಸೂಚನೆಯಂತೆ ತಾವು ನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ರಾಜಕೀಯ ಅನುಭವ ಹೊಂದಿರುವ ಅವರಿಗೆ ನಮ್ಮ ಜನರ ಮನಸ್ಸು ಮತ್ತು ಆಶಯಗಳು ಚೆನ್ನಾಗಿ ಅರ್ಥವಾಗುತ್ತವೆ” ಎಂದು ಖರ್ಗೆ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕು ಎಂಬ ಸಚಿವ ಶಿವಾನಂದ ಪಾಟೀಲ ಅವರ ಹೇಳಿಕೆಯು ವೈಯುಕ್ತಿಕ ಅಭಿಪ್ರಾಯವಾಗಿದೆ. ಶಾಸಕರ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವರು ತಿಳಿಸಿದರು.

2.50 ಲಕ್ಷ ಹುದ್ದೆ ಭರ್ತಿ ಗುರಿ: ಪೊಲೀಸ್ ನೇಮಕಾತಿ ಪಾರದರ್ಶಕ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಮಹತ್ವದ ವಿಷಯದ ಬಗ್ಗೆ ಮಾತನಾಡಿದ ಡಾ. ಪರಮೇಶ್ವರ, “ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಐದು ವರ್ಷಗಳ ಅವಧಿಯಲ್ಲಿ ಭರ್ತಿ ಮಾಡುವುದು ನಮ್ಮ ಗುರಿ” ಎಂದರು. ಒಳ ಮೀಸಲಾತಿ ಪ್ರಕ್ರಿಯೆಯಿಂದಾಗಿ ನೇಮಕಾತಿ ತಡವಾಗಿದೆ. ಆದರೆ, ನೇಮಕಾತಿ ಪ್ರಕ್ರಿಯೆ ಈಗ ಪುನಃ ಆರಂಭಗೊಳ್ಳಲಿದೆ.

ಮುಖ್ಯವಾಗಿ ಗೃಹ ಇಲಾಖೆಯ ಬಗ್ಗೆ ಹೇಳಿದ ಅವರು, “ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗ 12 ಸಾವಿರ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಡ್ತಿ ನೀಡಿದ್ದೆ. ಈಗಲೂ ಸಹ ನಿಯಮಾವಳಿಗಳ ಆಧಾರದ ಮೇಲೆ ಬಡ್ತಿ ನೀಡಲಾಗುವುದು” ಎಂದು ಭರವಸೆ ನೀಡಿದರು.

ಬಿಜೆಪಿ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ, ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ ಎಂದು ಸಚಿವರು ಭರವಸೆ ನೀಡಿದರು. 15,000 ಪೊಲೀಸ್ ಕಾನ್ಸ್‌ಟೇಬಲ್ಸ್ ಹುದ್ದೆಗಳ ನೇಮಕಾತಿಯನ್ನು ಹಂತ ಹಂತವಾಗಿ ಮಾಡಲಾಗುವುದು. ಸ್ಥಗಿತಗೊಂಡಿದ್ದ ಕೆಲವು ನೇಮಕಾತಿ ಪ್ರಕ್ರಿಯೆಗಳು ಈಗ ಪುನರಾರಂಭಗೊಳ್ಳಲಿವೆ ಎಂದು ಅವರು ತಿಳಿಸಿದರು.

ಐಎಎಸ್ ಅಧಿಕಾರಿಯ ನಿಧನಕ್ಕೆ ಸಂತಾಪ, ತನಿಖೆಗೆ ಆದೇಶ

ಇತ್ತೀಚೆಗೆ ನಡೆದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಅಪಘಾತದಲ್ಲಿನ ಸಾವಿನ ಕುರಿತು ಸಂತಾಪ ಸೂಚಿಸಿದ ಗೃಹ ಸಚಿವರು, ಘಟನೆ ಅತ್ಯಂತ ನೋವು ತಂದಿದೆ ಎಂದರು. ಅಪಘಾತಕ್ಕೆ ಚಾಲಕನ ಅಜಾಗರೂಕತೆ ಕಾರಣವೋ ಅಥವಾ ವಾಹನದ ತಾಂತ್ರಿಕ ಸಮಸ್ಯೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಾ. ಜಿ. ಪರಮೇಶ್ವರ ಅವರು ವಿವರಿಸಿದರು.

error: Content is protected !!